ವರ್ಗಾವಣೆ ಮಾಡುವುದು ಸಿಎಂ ಪರಮಾಧಿಕಾರ: ಸಚಿವ ಡಾ.ಎಚ್.ಸಿ.ಮಹದೇವಪ್ಪ
ಮೈಸೂರು: ಅಧಿಕಾರಿಗಳು ಮತ್ತು ನೌಕರರನ್ನು ವರ್ಗಾವಣೆ ಮಾಡುವುದು ಸರ್ಕಾರ ಮತ್ತು ಮುಖ್ಯಮಂತ್ರಿಗಳ ಪರಮಾಧಿಕಾರ. ಇದರಲ್ಲಿ ಯಾರೊಬ್ಬರೂ ಮೂಗು ತೂರಿಸುವ ಅಧಿಕಾರ ಇಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಡಾ.ಯತೀಂದ್ರ ಸಿದ್ದರಾಮಯ್ಯ ವೀಡಿಯೋ ವೈರಲ್ ವಿಚಾರಕ್ಕೆ ಗುರುವಾರ ಪ್ರತಿಕ್ರಿಯಿಸಿದ ಅವರು, 'ನಾನು ನೋಡಿಯೂ ಇಲ್ಲ, ಕೇಳಿಯೂ ಇಲ್ಲ. ನನಗೆ ಗೊತ್ತೇ ಇಲ್ಲ' ಎಂದು ಹೇಳಿದರು.
ವರ್ಗಾವಣೆ ಮಾಡುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಯಾರು ಏನೇ ಹೇಳಬಹುದು. ವರ್ಗಾವಣೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಅವಕಾಶ ಇಲ್ಲ. ಒಂದು ವೇಳೆ ಆ ರೀತಿ ನಡೆದಿದ್ದರೆ ಕಾನೂನು ತನ್ನ ಕ್ರಮ ನಿರ್ವಹಿಸುತ್ತದೆ. ಈ ವೀಡಿಯೊ ವೈರಲ್ ಆಗಿರುವುದರಿಂದ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
''ಕೇಂದ್ರ ಸರ್ಕಾರದಿಂದ ಅಧಿಕಾರಿಗಳ ದುರ್ಬಳಕೆಯಾಗಿದ್ದು, ನಿನ್ನೆ ಮೈಸೂರು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಮುಖ್ಯಮಂತ್ರಿ ಕಚೇರಿಗೂ ಈ ಕಾರ್ಯಕ್ರಮದ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾದ ನನಗೂ ಮಾಹಿತಿ ಇಲ್ಲ. ಈ ಮೂಲಕ ಗಣತಂತ್ರ ವ್ಯವಸ್ಥೆ ದುರ್ಬಲಗೊಳಿಸಲಾಗುತ್ತಿದೆ. ಈ ವಿಚಾರವಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತೇನೆ''
-ಡಾ.ಎಚ್.ಸಿ.ಮಹದೇವಪ್ಪ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ