ಶಿವಮೊಗ್ಗ | ತುಂಗಾ ಜಲಾಶಯ ಬಹುತೇಕ ಭರ್ತಿ; ಮುನ್ನೆಚ್ಚರಿಕೆ ವಹಿಸಲು ನದಿ ತೀರದ ನಿವಾಸಿಗಳಿಗೆ ಸೂಚನೆ
ಶಿವಮೊಗ್ಗ, ಜು.5: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತುಂಗಾ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ಯಾವುದೇ ಕ್ಷಣದಲ್ಲೂ ನೀರು ಹೊರ ಬಿಡುವ ಸಾಧ್ಯತೆ ಇದೆ.
ಸಮುದ್ರ ಮಟ್ಟದಿಂದ 588.24 ಮೀಟರ್ ಗರಿಷ್ಠ ಮಟ್ಟದ ಜಲಾಶಯದಲ್ಲಿ ಪ್ರಸಕ್ತ 587.54 ಮೀಟರ್ ನಷ್ಟು ನೀರಿದೆ. ಪ್ರಸಕ್ತ ಡ್ಯಾಮ್‌ನಲ್ಲಿ ಇವತ್ತು ನೀರಿನ ಮಟ್ಟ 587.54 ಅಡಿಗೆ ತಲುಪಿದೆ.
ಕಳೆದ 24 ಗಂಟೆ ಅವಧಿಯಲ್ಲಿ ನೀರಿನ ಮಟ್ಟ ಸುಮಾರು ಒಂದು ಅಡಿಯಷ್ಟು ಏರಿಕೆ ಕಂಡಿದೆ. ಒಳ ಹರಿವು 4830 ಕ್ಯೂಸೆಕ್‌ನಷ್ಟಿದೆ. ತುಂಗಾ ಜಲಾಶಯವು 2.848 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಪ್ರಸಕ್ತ 2.019 ಟಿಎಂಸಿ ನೀರಿನ ಸಂಗ್ರಹ ಹೊಂದಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ತುಂಗೆಗೆ ಭರಪೂರ ನೀರು ಹರಿದು ಬರುತ್ತಿದೆ.
ಇತ್ತ ತೀರ್ಥಹಳ್ಳಿಯಲ್ಲಿಯೂ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗೆಯಲ್ಲಿ ನೀರಿನ ಹರಿವು ವೇಗ ಪಡೆದುಕೊಂಡಿದೆ. ತುಂಗಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ: ತುಂಗಾ ಮೇಲ್ದಂಡೆ ಯೋಜನೆ ಡ್ಯಾಮ್ ಪೂರ್ಣ ಮಟ್ಟಕ್ಕೆ ನೀರು ಸಂಗ್ರಹವಾಗಿದ್ದು, ಮುಂಗಾರು ಪ್ರಾರಂಭವಾಗಿ ಜಲಾನಯನ ಪ್ರದೇಶದಲ್ಲಿ ಮಳೆಯಾದರೆ ಹೆಚ್ಚಿನ ಪ್ರಮಾಣದ ಒಳಹರಿವು ಬಂದರೆ ಯಾವ ಕ್ಷಣದಲ್ಲಾದರೂ ನದಿಗೆ ನೀರನ್ನು ಬಿಡುವ ಸಂಭವವಿದೆ. ಆದ್ದರಿಂದ ತುಂಗಾ ನದಿಯ ಪಾತ್ರದಲ್ಲಿ ಬರುವ ಗ್ರಾಮಗಳ ಪ್ರದೇಶದ ಗ್ರಾಮಸ್ಥರು ನದಿಪಾತ್ರದಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಹಾಗೂ ದನಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡುವುದು ಮಾಡದೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ವಹಿಸಲು ಪ್ರಕಟನೆ ತಿಳಿಸಿದೆ.