ಒಳ ಹರಿವು ಹೆಚ್ಚಳ | ತುಂಗಾಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸಲು ಸಚಿವ ತಂಗಡಗಿ ಸೂಚನೆ
ತುಂಗಭದ್ರಾ ಜಲಾಶಯ(PC:x/@Indic_Vibhu)
ಬೆಂಗಳೂರು : ಮಳೆಯಿಂದಾಗಿ ತುಂಗಾಭದ್ರಾ ಜಲಾಶಯಕ್ಕೆ ಹೆಚ್ಚಿನ ಒಳ ಹರಿವು ಬರುತ್ತಿರುವ ಹಿನ್ನೆಲೆಯಲ್ಲಿ ನಾಳೆ(ಜು. 19) ಬೆಳಗ್ಗೆಯಿಂದ ನಾಲೆಗಳಿಗೆ ನೀರು ಹರಿಸಬೇಕು ಎಂದು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಆಗುತ್ತಿರುವುದರಿಂದ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಒಳ ಹರಿವು ಪ್ರಾರಂಭವಾಗಿದೆ. ಜು.18ರ ವೇಳೆಗೆ ಜಲಾಶಯದಲ್ಲಿ 46.802 ಟಿಎಂಸಿ ನೀರು ಸಂಗ್ರಹ ಇದ್ದು, ಒಳ ಹರಿವಿನ ಹೆಚ್ಚಿಸಿದೆ ಇದೆ ಎಂದು ಹೇಳಿದ್ದಾರೆ.
ಇದೇ ಪ್ರಮಾಣದಲ್ಲಿ ಒಳ ಹರಿವು ಮುಂದುವರೆದಲ್ಲಿ ವಾರದಲ್ಲಿ ಜಲಾಶಯದ ಭರ್ತಿಯಾಗುವ ನಿರೀಕ್ಷೆ ಇದೆ. ಸದ್ಯಕ್ಕೆ ಒಳ ಹರಿವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಸಭೆ ನಡೆಸದೆ ನಾಲೆಗಳಿಗೆ ನೀರು ಹರಿಸಲು ಸೂಚಿಸಲಾಗಿದ್ದು, ಶೀಘ್ರದಲ್ಲೇ ಐಸಿಸಿ ಸಭೆಗೆ ದಿನಾಂಕ ನಿಗದಿಪಡಿಸಲಾಗುವುದು. ರೈತರ ಹಿತದೃಷ್ಟಿಯಿಂದ ಮುಂಗಡವಾಗಿ ನೀರು ಬಿಡುಗಡೆಗೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಎಡದಂಡೆ ಮುಖ್ಯ ಕಾಲುವೆಗೆ ಜು.19ರಿಂದ 4,100 ಕ್ಯೂಸೆಕ್ಸ್ ನಂತೆ, ಬಲದಂಡೆ ಕೆಳಮಟ್ಟದ ವಿತರಣಾ ಕಾಲುವೆಗೆ ಜು.19ರಿಂದ 650 ಕ್ಯೂಸೆಕ್ಸ್ ನಂತೆ, ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆಗೆ ಜು.19ರಿಂದ 1300ಕ್ಯೂಸೆಕ್ನಂತೆ ಹಾಗೂ ಕಾರ್ಖಾನೆಗಳಿಗೆ 60 ಕ್ಯೂಸೆಕ್ಸ್ ನಂತೆ ನೀರು ಹರಿಸಲಾಗುವುದು. ಇನ್ನು ರಾಯಬಸವಣ್ಣ ಕಾಲುವೆಗೆ ಈಗಾಗಲೇ ಜೂ.1ರಿಂದ 180 ಕ್ಯೂಸೆಕ್ಸ್ನಂತೆ ನೀರು ಹರಿಸಲಾಗುತ್ತಿದೆ ಎಂದು ಶಿವರಾಜ್ ತಂಗಡಗಿ ಮಾಹಿತಿ ನೀಡಿದ್ದಾರೆ.