ಕಾಸಿಗಾಗಿ ವರ್ಗಾವಣೆಯಿಂದಲೇ ತುಂಗಭದ್ರಾ ಜಲಾಶಯದ ಗೇಟ್ ಕೊಚ್ಚಿ ಹೋಗಿದೆ : ಎಚ್ಡಿಕೆ
PC : x/@hd_kumaraswamy
ಬೆಂಗಳೂರು: ರಾಜ್ಯ ಸರಕಾರ ಹಣ ಪಡೆದು ವರ್ಗಾವಣೆ ನೀಡಿದ ಪರಿಣಾಮದಿಂದಲೇ ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್ ಗೇಟ್ ಕೊಚ್ಚಿ ಹೋಗುವಂತ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಗಳವಾರ ನಗರದ ಎಚ್ಎಂಟಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಘಟನೆ ಅತ್ಯಂತ ಗಂಭೀರವಾಗಿದೆ. ಈಗಲಾದರೂ ಅಧಿಕಾರಿಗಳ ವರ್ಗಾವಣೆ ಮಾಡುವಾಗ ಹಣ ತೆಗೆದುಕೊಂಡು ವರ್ಗ ಮಾಡುವ ಕೆಲಸ ಬಿಡಿ ಎಂದು ಹೇಳಿದರು.
ದುಡ್ಡು ಕೊಟ್ಡು ವರ್ಗಾವಣೆ ಮಾಡಿಸಿಕೊಳ್ಳುವ ಅಧಿಕಾರಿಗೆ ಕೆಲಸದ ಕಡೆ ಗಮನ ಎಲ್ಲಿರುತ್ತದೆ. ಕೊಟ್ಟ ದುಡ್ಡನ್ನು ಮರಳಿ ವಸೂಲಿ ಮಾಡಿಕೊಳ್ಳುವ ಕಡೆ ಅವನ ಗಮನ ಇರುತ್ತದೆ. ಅಲ್ಲಿರುವಷ್ಟರಲ್ಲಿ ಅಷ್ಟೂ ಹಣವನ್ನು ಸಂಗ್ರಹ ಮಾಡುವ ಗುರಿ ಹೊಂದಿರುತ್ತಾನೆ. ಹೀಗಾಗಿ ಅವನ ಗಮನವೆಲ್ಲಾ ಹಣದ ಕಡೆಯೇ ಇರುತ್ತದೆ. ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಸೇರಿ ಎಲ್ಲ ಉನ್ನತ ಅಧಿಕಾರಿಗಳಿಗೆ ದುಡ್ಡು ತೆಗೆದುಕೊಂಡು ವರ್ಗಾವಣೆ ಮಾಡಿ ಕೊಡಲಾಗುತ್ತಿದೆ ಎಂದು ದೂರಿದರು.
ತುಂಗಭದ್ರಾ ಅಣೆಕಟ್ಟು ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ಮಾಡಬೇಕು. ತರಾತುರಿಯಲ್ಲಿ ಮಾಡಲು ಹೋಗಿ ಮತ್ತೇನೊ ಅವಾಂತರ ಮಾಡಿಕೊಳ್ಳಬೇಡಿ. ಪರಿಣಿತರ ನೆರವು ಪಡೆದು ಶಾಶ್ವತವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ. ಮತ್ತೆ ರೈತರಿಗೆ ತೊಂದರೆ ಕೊಡುವುದು ಬೇಡ ಎಂದು ಅವರು ಸಲಹೆ ಮಾಡಿದರು.
ಅಣೆಕಟ್ಟೆಯ ಸುರಕ್ಷತೆಯ ಬಗ್ಗೆ ತಾಂತ್ರಿಕ ಸಮಿತಿ ಪ್ರತೀ ವರ್ಷ ಭೇಟಿ ಕೊಟ್ಟು ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡುತ್ತದೆ. ಕ್ರಸ್ಟ್ ಗೇಟ್ ಗಳಿಗೆ ಅಳವಡಿಸಿರುವ ಸರಪಳಿಗಳನ್ನು ಕಾಲ ಕಾಲಕ್ಕೆ ಪರಿಶೀಲನೆ ಮಾಡುತ್ತಿರಬೇಕು. ಅವುಗಳಿಗೆ ಹಲವಾರು ವರ್ಷಗಳಿಂದ ಲೂಬ್ರಿಕೇಷನ್ ಮಾಡದ ಕರ್ನಾಟಕಕ್ಕೆ ಈ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಕುಮಾರಸ್ವಾಮಿ ಹೇಳಿದರು.