ಇಲೆಕ್ಟ್ರಿಕ್ ಬಸ್ ಚಾಲಕರ ನೇಮಕಾತಿ ವಿಚಾರ: ಸಿಎಂ ಸಿದ್ದರಾಮಯ್ಯ-ಪ್ರತಿಪಕ್ಷ ನಾಯಕ ಆರ್.ಅಶೋಕ ‘ಜಟಾಪಟಿ’
ಬೆಂಗಳೂರು: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳಲ್ಲಿ ಸಂಚರಿಸುತ್ತಿರುವ ಇಲೆಕ್ಟ್ರಿಕ್ ಬಸ್‍ಗಳ ಚಾಲಕರನ್ನಾಗಿ ಕೇರಳ ಮೂಲದವರಿಗೆ ಉದ್ಯೋಗ ನೀಡಲಾಗಿದೆ ಎಂಬ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷ ನಾಯಕ ಆರ್.ಅಶೋಕ್ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.
ಶುಕ್ರವಾರ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸ್ವಾಮಿ ವಿಪಕ್ಷ ನಾಯಕರೇ, ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೋ? ಅಥವಾ ವಿಪಕ್ಷ ನಾಯಕ ಅಸ್ವಿತ್ವದಲ್ಲಿದ್ದಾರೆಂದು ಜನರಿಗೆ ತಿಳಿಸಲು ಟ್ವೀಟ್ ಮಾಡುತ್ತಿರೋ? ಇದು ನಮ್ಮನ್ನೂ ಸೇರಿಸಿಕೊಂಡಂತೆ ರಾಜ್ಯದ ಜನಸಾಮಾನ್ಯರಿಗೂ ಅರ್ಥವಾಗದೆ ಇರುವ ಯಕ್ಷ ಪ್ರಶ್ನೆ. ನೀವು ಸುಳ್ಳಿನ ಕೋಟೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ ಅದರ ಆಯುಷ್ಯ ಕಡಿಮೆ. ನಮ್ಮ ಸತ್ಯದ ಒಂದು ಏಟಿಗೆ ಅದು ಕುಸಿದುಬೀಳುತ್ತಲೇ ಇದೆ. ನೀವು ಮತ್ತೆ ಮತ್ತೆ ಸುಳ್ಳುಗಳನ್ನು ಹೇಳಿ ನಮ್ಮ ಕೈಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಲೇ ಇದ್ದೀರಿ. ಇದು ಮುಂದುವರಿಯಲಿ ಆಲ್ ದಿ ಬೆಸ್ಟ್’ ಎಂದು ಲೇವಡಿ ಮಾಡಿದ್ದಾರೆ.
‘ಈಗ ಸತ್ಯದ ಮಾತುಗಳನ್ನು ಕೇಳುವಂತವರಾಗಿ. ಪ್ರಪ್ರಥಮವಾಗಿ ಸಾರಿಗೆ ಸಂಸ್ಥೆಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳ ಸೇರ್ಪಡೆಯು ಕೇಂದ್ರದ ನೀತಿ ಯೋಜನೆಯಂತೆ ಜಾರಿಯಾಗಿದೆ. ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರಿಗೆ ಸಂಸ್ಥೆಗಳು ನೇರವಾಗಿ ಖರೀದಿಸುವಂತಿಲ್ಲ, ಖಾಸಗಿ ಕಂಪೆನಿಯವರು ಮಾಲಕತ್ವ ಹೊಂದಿರುತ್ತಾರೆ, ಅವರಿಗೆ ಸಬ್ಸಿಡಿಯನ್ನು ಕೇಂದ್ರ ಸರಕಾರವು ನೇರವಾಗಿ ನೀಡುತ್ತದೆ ಹಾಗೂ ಚಾಲಕರನ್ನು ನಿಯೋಜಿಸುವ ಕಾರ್ಯವು ಖಾಸಗಿ ಅವರಿಗೆ ನೀಡಲಾಗಿದೆ’ ಎಂದು ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.
‘ಚಾಲಕರ ವೇತನ, ಆಯ್ಕೆ ಯಾವುದರಲ್ಲಿಯೂ ಸಾರಿಗೆ ಸಂಸ್ಥೆಗಳಿಗೆ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವಿಲ್ಲ. ಬಸ್ಸುಗಳ ಕಾರ್ಯಾಚರಣೆ ಹೊಣೆ ಮಾತ್ರ ಸಾರಿಗೆ ಸಂಸ್ಥೆಗಳದ್ದು, ಈ ವಿಷಯವನ್ನು ಹತ್ತು ಹಲವಾರು ಬಾರಿ ನಮ್ಮ ಸಾರಿಗೆ ಸಚಿವರು ಪ್ರತಿಯೊಂದು ವೇದಿಕೆಯಲ್ಲಿಯೂ ಸ್ಪಷ್ಟಪಡಿಸಿರುತ್ತಾರೆ. ತಮಗೆ ಅದು ಅರ್ಥವಾಗದಿರುವುದು ನಿಜಕ್ಕೂ ಶೋಚನೀಯ. ಯುವಕರಿಗೆ ಅದರಲ್ಲಿಯೂ ರಾಜ್ಯದ ಯುವಕರಿಗೆ ನಿರುದ್ಯೋಗ ಭಾಗ್ಯ ಕಲ್ಪಿಸಲು ಕಾರಣವಾದ ಕೇಂದ್ರ ದ ಈ ಯೋಜನೆಯ ಬಗೆಗಿನ ತಮ್ಮ ನೋವು, ದುಃಖ ಮತ್ತು ಸಂಕಟಗಳಿಗೆ ಉತ್ತರ ಕಂಡುಕೊಳ್ಳುವ ತವಕ ನಿಮ್ಮಲ್ಲಿದ್ದರೆ ದಯವಿಟ್ಟು ನಿಮ್ಮ ಪ್ರಧಾನಿ ಮೋದಿ ಅವರನ್ನು ಕೇಳಿ ಉತ್ತರ ಪಡೆಯಿರಿ, ಅಸಂಬದ್ಧ ಟ್ವೀಟ್‍ಗಳ ಮೂಲಕ ನಿಮ್ಮ ಅಜ್ಞಾನವನ್ನು ಪ್ರದರ್ಶಿಸಬೇಡಿ’ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
‘ಸಾರಿಗೆ ಸಂಸ್ಥೆಗಳಲ್ಲಿ 5 ವರ್ಷಗಳಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಮಾಡದೇ, ಡಕೋಟ ಬಸ್ಸುಗಳನ್ನು ದಯಪಾಲಿಸಿರುವ ನೀವು ಮಾತನಾಡುವ ಪರಿಗೆ ವಿಷಾದವಲ್ಲದೇ ಮತ್ತೇನು ವ್ಯಕ್ತಪಡಿಸಲು ಸಾಧ್ಯ? ತಮ್ಮ ಬೇಜಾವಾಬ್ದಾರಿ, ಆಧಾರರಹಿತ, ತಪ್ಪು ಹೇಳಿಕೆಗಳಿಗೆ ಸಂತಾಪ ಸೂಚಿಸುತ್ತಾ ನಿಮಗೆ ನೀವು ನಂಬಿರುವ ದೇವರು ಸತ್ಯ ಹೇಳುವ ಸದ್ಬುದ್ದಿಯನ್ನು ಕರುಣಿಸಲು ಎಂದು ಹಾರೈಸುತ್ತೇನೆ’ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ‘ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಟ್ವೀಟ್ ನಾಚಿಕೆಗೇಡಿತನದ ಪರಮಾವಧಿಯೋ ಅಥವಾ ನಾನಿನ್ನೂ ಸಿಎಂ ಕುರ್ಚಿಯಲ್ಲಿ ಕೂತಿದ್ದೇನೆಂದು ತೋರಿಸುವ ಅನಿವಾರ್ಯತೆಯೋ ಅರ್ಥವಾಗುತ್ತಿಲ್ಲ. ನಿಮ್ಮ ರೀತಿಯ ಅಹಂಕಾರದ ಮಾತುಗಳು ನನಗೆ ಬರುವುದಿಲ್ಲ, ಅದು ನನಗೆ ಬೇಡವೂ ಬೇಡ. ಆದರೆ, ಜೂನ್ 4ರಂದು ಯಾರು ಯಾರಿಗೆ ದೊಣ್ಣೆ ಕೊಟ್ಟು ಹೊಡಿಸಿಕೊಳ್ಳುತ್ತಾರೆ, ನಂತರ ಬಡಿಗೆಯಿಂದ ಹೊಡೆದು ಯಾರು ಯಾರನ್ನ ಕುರ್ಚಿಯಿಂದ ಕೆಳಗಿಳಿಸುತ್ತಾರೆ ನೋಡೋಣ. ತಾವು ಅಪರೂಪಕ್ಕೆ ತಮ್ಮ ಪ್ರಗಾಢ ನಿದ್ದೆಯಿಂದ ಎದ್ದು ನನ್ನ ಒಂದು ಟೀಕೆಗೆ ಉತ್ತರ ನೀಡುವ ಶ್ರಮ ತೆಗೆದುಕೊಂಡಿದ್ದೀರಿ. ಮೊದಲು ಅದಕ್ಕೆ ಅಭಿನಂದನೆಗಳು. ಆದರೆ ಅದರಲ್ಲೂ ಮೈಯೆಲ್ಲಾ ಎಣ್ಣೆ ಸವರಿಕೊಂಡಿರುವಂತೆ ತಮ್ಮ ಕರ್ತವ್ಯದಿಂದ ಜಾರಿಕೊಂಡು ಕೇಂದ್ರ ಸರಕಾರದ ಮೇಲೆ ಗೂಬೆ ಕೋರಿಸುತ್ತಿರಲ್ಲ ತಮ್ಮ ಭಂಡತನಕ್ಕೆ ಏನು ಹೇಳಬೇಕು ಎಂದು ಟೀಕಿಸಿದ್ದಾರೆ.
"ಪತ್ರಿಕೆಗಳಲ್ಲಿ ಹತ್ತಾರು ಕೋಟಿ ಖರ್ಚು ಮಾಡಿ ಪುಟಗಟ್ಟಲೆ ಜಾಹೀರಾತು ಕೊಡುವಾಗ ಅದು ನಿಮ್ಮ ಯೋಜನೆ. ಹಸಿರು ಬಾವುಟ ತೋರಿಸಿ ಬಸ್ಸಿಗೆ ಚಾಲನೆ ನೀಡುವಾಗ ಅದು ತಮ್ಮ ಸರಕಾರದ ಕೊಡುಗೆ. ಆದರೆ ಅದರಲ್ಲಿ ನ್ಯೂನತೆಗಳು ಕಂಡು ಬದರೆ ಅದು ಕೇಂದ್ರದ ಹೊಣೆ. ಇದು ಯಾವ ಸೀಮೆ ಆಡಳಿತ ಸ್ವಾಮಿ? ತಮಗೆ ಕರ್ನಾಟಕದ ಜನತೆ ಅಧಿಕಾರ ಕೊಟ್ಟಿರುವುದು ಎಲ್ಲದಕ್ಕೂ ಕೇಂದ್ರವನ್ನು ದೂಷಿಸುತ್ತಾ ಕೈಚೆಲ್ಲಿ ಕುಳಿತುಕೊಳ್ಳಲಿ ಅಂತ ಅಲ್ಲ. ನಿಮಗೆ ನಿಜವಾಗಿಯೂ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎನ್ನುವ ಬದ್ಧತೆ ಇದ್ದಿದ್ದರೆ ಕೇಂದ್ರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಡಬಹುದಿತ್ತಲ್ಲ? ಎಲ್ಲದಕ್ಕೂ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ತಾವು, ಎಲ್ಲದಕ್ಕೂ ಕೇಂದ್ರ ಮಂತ್ರಿಗಳಿಗೆ ಮನವಿ ಪತ್ರ ಕೊಡುವ ತಾವು ಇದಕ್ಕೆ ಮಾತ್ರ ಯಾಕೆ ಮಾಡಲಿಲ್ಲ. ಅಸಲಿಗೆ ನಾನು ಈ ವಿಷಯ ಪ್ರಸ್ತಾಪ ಮಾಡುವವರೆಗೂ ನಿಮಗೆ ಈ ವಿಷಯ ಗೊತ್ತೇ ಇರಲಿಲ್ಲ. ಇದು ನಿಮ್ಮ ಆಡಳಿತ ವೈಖರಿ. ನಾಲ್ಕು ಅಹಂಕಾರದ ಮಾತುಗಳು ಆಡಿದ ಮಾತ್ರಕ್ಕೆ ವಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂದು ತಿಳಿದಿದ್ದರೆ ಅದು ತಮ್ಮ ಭ್ರಮೆ. ನಿಮ್ಮ ಭ್ರಮಾಲೋಕ ವಾಸ ಮುಂದುವರೆಯಲಿ, ಆಲ್ ದಿ ಬೆಸ್ಟ್" ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸ್ವಾಮಿ ವಿರೋಧ ಪಕ್ಷದ ನಾಯಕರೇ,
— Siddaramaiah (@siddaramaiah) May 30, 2024
ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೋ? ಅಥವಾ ವಿರೋಧ ಪಕ್ಷದ ನಾಯಕ ಅಸ್ವಿತ್ವದಲ್ಲಿದ್ದಾರೆ ಎಂದು ಜನರಿಗೆ ತಿಳಿಸಲು ಟ್ವೀಟ್ ಮಾಡುತ್ತಿರೋ? ಇದು ನಮ್ಮನ್ನೂ ಸೇರಿಸಿಕೊಂಡಂತೆ ರಾಜ್ಯದ ಜನಸಾಮಾನ್ಯರಿಗೂ ಅರ್ಥವಾಗದೆ ಇರುವ ಯಕ್ಷ ಪ್ರಶ್ನೆ.
ನೀವು ಸುಳ್ಳಿನ ಕೋಟೆಯನ್ನು ಎಷ್ಟೇ ದೊಡ್ಡದಾಗಿ ಕಟ್ಟಿದರೂ ಅದರ… https://t.co/RCXM9eNFtv
ಸ್ವಾಮಿ ಸಿಎಂ @siddaramaiah ನವರೇ,
— R. Ashoka (ಮೋದಿ ಅವರ ಕುಟುಂಬ) (@RAshokaBJP) May 30, 2024
ನಿಮ್ಮ ಟ್ವೀಟ್ ನಾಚಿಕೆಗೇಡಿತನದ ಪರಮಾವಧಿಯೋ ಅಥವಾ ನಾನಿನ್ನೂ ಸಿಎಂ ಕುರ್ಚಿಯಲ್ಲಿ ಕೂತಿದ್ದೇನೆ ಎಂದು ತೋರಿಸುವ ಅನಿವಾರ್ಯತೆಯೋ ಅರ್ಥವಾಗುತ್ತಿಲ್ಲ.
ನಿಮ್ಮ ರೀತಿಯ ಅಹಂಕಾರದ ಮಾತುಗಳು ನನಗೆ ಬರುವುದಿಲ್ಲ, ಅದು ನನಗೆ ಬೇಡವೂ ಬೇಡ. ಆದರೆ ಜೂನ್ 4ರಂದು ಯಾರು ಯಾರಿಗೆ ದೊಣ್ಣೆ ಕೊಟ್ಟು… https://t.co/DA0rz2fTG3 pic.twitter.com/vahnVIuuvO