ಹಜ್ ಕ್ಯಾಂಪ್ ನ ಸ್ವಯಂ ಸೇವಕರಿಗೆ ಉಮ್ರಾ ಯಾತ್ರೆ: ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು, ಆ.22: ಹಜ್ ಯಾತ್ರೆಯ ಸಂದರ್ಭದಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ಹಜ್ ಭವನದಲ್ಲಿ ನಿಸ್ವಾರ್ಥದಿಂದ ಯಾತ್ರಿಗಳ ಸೇವೆ ಮಾಡುವಂತಹ ಆರ್ಥಿಕವಾಗಿ ಹಿಂದುಳಿದಿರುವ ಸ್ವಯಂ ಸೇವಕರಿಗೆ ಪವಿತ್ರ ಉಮ್ರಾ ಯಾತ್ರೆಗೆ ಕಳುಹಿಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ವಸತಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಮಂಗಳವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ 2023ನೆ ಸಾಲಿನ ಹಜ್‍ಯಾತ್ರೆಯ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ದುಡಿದವರು, ವಿಮಾನ ನಿಲ್ದಾಣ, ಕಸ್ಟಮ್ಸ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಸ್ವಯಂ ಸೇವಕರ ಪರಿಶ್ರಮದಿಂದ ಹಜ್ ಸಮಿತಿ ಆಯೋಜಿಸುವ ಕ್ಯಾಂಪ್ ಯಶಸ್ಸು ಕಂಡಿದೆ. ಇಲ್ಲಿ ಸ್ವಯಂ ಸೇವಕರಾಗಿ ಸೇವೆ ಮಾಡುವ ಶೇ.70-80ರಷ್ಟು ಮಂದಿ ಆರ್ಥಿಕವಾಗಿ ಹಿಂದುಳಿದವರು. ತಮ್ಮ ದುಡಿಮೆಯನ್ನು ಬಿಟ್ಟು, ಯಾತ್ರಿಗಳ ಸೇವೆಯನ್ನು ಮಾಡುತ್ತಿರುವುದು ಶ್ಲಾಘನೀಯವಾದದ್ದು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
2018ರಲ್ಲಿ ನಾನು ಸಚಿವನಾಗಿದ್ದಾಗ 900 ಮಂದಿ ಸ್ವಯಂ ಸೇವಕರನ್ನು ಗುರುತಿಸಿ ಉಮ್ರಾ ಯಾತ್ರೆಗೆ ಕಳುಹಿಸಲಾಗಿತ್ತು. ಈಗ 1300 ಮಂದಿ ಸ್ವಯಂ ಸೇವಕರಿದ್ದಾರೆ. ಯಾರು ಒಮ್ಮೆಯೂ ಉಮ್ರಾ ಯಾತ್ರೆ ಕೈಗೊಂಡಿಲ್ಲವೋ? ಯಾರಿಗೆ ಉಮ್ರಾ ಯಾತ್ರೆಗೆ ತೆರಳಲು ಆರ್ಥಿಕವಾಗಿ ಶಕ್ತಿ ಇಲ್ಲವೋ ಅಂತಹ ಸ್ವಯಂ ಸೇವಕರು ಮಾಹಿತಿ ಒದಗಿಸಿದರೆ ಅವರಿಗೆ ಯಾತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸ್ವಯಂ ಸೇವಕರಾಗಿ ದುಡಿಯುವವರ ಪೈಕಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿ 50 ಮಂದಿ ಮಹಿಳಾ ಸ್ವಯಂ ಸೇವಕರು ಹಾಗೂ ಅವರೊಂದಿಗೆ ಸಂಗಾತಿ(ಮೆಹ್ರಮ್)ಯನ್ನು ಸೇರಿಸಿ 100 ಮಂದಿ ಹಾಗೂ 100 ಮಂದಿ ಹಿರಿಯ ಸ್ವಯಂ ಸೇವಕರನ್ನು ಗುರುತಿಸಿ ಒಟ್ಟು 200 ಮಂದಿಯನ್ನು ಈ ವರ್ಷ ಉಮ್ರಾ ಯಾತ್ರೆಗೆ ಕಳುಹಿಸಲಾಗುವುದು ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಮಾತನಾಡಿ, ಈ ಬಾರಿ ಅತ್ಯುತ್ತಮ ವಾಗಿ ಹಜ್ ಕ್ಯಾಂಪ್ ಆಯೋಜಿಸಲಾಗಿತ್ತು. ಯಾತ್ರಿಗಳು ಹಜ್ ಭವನಕ್ಕೆ ಬಂದು ಇಲ್ಲಿಂದ ಮಕ್ಕಾ, ಮದೀನಾಗೆ ತಲುಪುವವರೆಗೆ ಯಾವುದೇ ತೊಂದರೆ ಆಗದಂತೆ ಎಲ್ಲರೂ ಶ್ರಮಿಸಿದ್ದಾರೆ ಎಂದರು.
ಯಾತ್ರಿಗಳನ್ನು ಬೀಳ್ಕೊಡಲು ಬರುವಂತಹ ಅವರ ಸಂಬಂಧಿಕರಿಗಾಗಿ ಝಮೀರ್ ಅಹ್ಮದ್ ಪ್ರತಿದಿನ 20 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದರು. ಹಜ್ ಕ್ಯಾಂಪ್ ಯಶಸ್ಸಿಗೆ ಹೇಗೆ ನಾವೆಲ್ಲ ಒಂದು ತಂಡವಾಗಿ ಕೆಲಸ ಮಾಡಿದ್ದೇವೆಯೋ ಅದೇ ರೀತಿ ಎಲ್ಲೆಡೆಯೂ ತಂಡವಾಗಿ ಸಮುದಾಯದ ಸೇವೆ ಮಾಡಿದರೆ ನಾವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ರಾಜ್ಯ ಸರಕಾರದಿಂದ ಅಗತ್ಯವಿರುವ ನೆರವು ಸಮುದಾಯಕ್ಕೆ ನೀಡಲು ನಾನು ಹಾಗೂ ಝಮೀರ್ ಅಹ್ಮದ್ ಬದ್ಧರಾಗಿದ್ದೇವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಮೌಲಾನ ಝೈನುಲ್ ಆಬಿದೀನ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ರಾಜ್ಯ ಹಜ್ ಸಮಿತಿಯ ಮಾಜಿ ಅಧ್ಯಕ್ಷ ರೌಫುದ್ದೀನ್ ಕಚೇರಿವಾಲ, ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ಸರ್ದಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅವ್ಯವಸ್ಥೆಯ ಆಗರವಾದ ಕಾರ್ಯಕ್ರಮ: ಹಜ್ ಭವನದಲ್ಲಿ ಪೊಲೀಸ್, ವಿಮಾನ ನಿಲ್ದಾಣ ಹಾಗೂ ಕಸ್ಟಮ್ಸ್ ಅಧಿಕಾರಿಗಳು, ಸ್ವಯಂ ಸೇವಕರಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವು ಅವ್ಯವಸ್ಥೆಯ ಆಗರವಾಗಿತ್ತು. ಅಧಿಕಾರಿಗಳು ಹಾಗೂ ಸ್ವಯಂ ಸೇವಕರನ್ನು ಸನ್ಮಾನಿಸುವ ವೇಳೆ ವೇದಿಕೆ ಬಳಿ ಜನಜಂಗುಳಿ ಸೇರಿದ್ದರಿಂದ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಅಂತಿಮವಾಗಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.