ಸುಪ್ರೀಂ ಕೋರ್ಟ್ನಲ್ಲಿ ‘ಬುಲ್ಡೋಜರ್’ ವಿಷಯದಲ್ಲಿ ಮಧ್ಯಸ್ಥಿಕೆಗಾಗಿ ಕೋರಿದ ವಿಶ್ವಸಂಸ್ಥೆಯ ತಜ್ಞ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ವಸತಿ ಕುರಿತು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಪ್ರೊ.ಬಾಲಕೃಷ್ಣನ್ ರಾಜಗೋಪಾಲ ಅವರು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ದೃಷ್ಟಿಕೋನದಿಂದ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ನೆರವಾಗಲು ಬುಲ್ಡೋಜರ್ ಕಾರ್ಯಾಚರಣೆಗಳ ವಿಷಯದಲ್ಲಿ ಮಧ್ಯಸ್ಥಿಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಕ್ರಿಮಿನಲ್ ಪ್ರಕರಣಗಳ ಆರೋಪಿಗಳ ಆಸ್ತಿಗಳನ್ನು ನೆಲಸಮಗೊಳಿಸಲು ವಿವಿಧ ರಾಜ್ಯ ಸರಕಾರಗಳಿಂದ ಬುಲ್ಡೋಜರ್ ಕಾರ್ಯಾಚರಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ನೇಮಕಗೊಂಡಿರುವ ತಜ್ಞರಾಗಿರುವ ಪ್ರಸ್ತಾವಿತ ಮಧ್ಯಸ್ಥಿಕೆದಾರರು, ಕಟ್ಟಡಗಳನ್ನು ನೆಲಸಮಗೊಳಿಸುವ ನಿರಂಕುಶ ಕಾರ್ಯಾಚರಣೆಗಳು ವಸತಿ ಸೌಲಭ್ಯ ಸೇರಿದಂತೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿಗೆ ವಿರುದ್ಧವಾಗಿವೆ ಮತ್ತು ಅಸಮಾನವಾಗಿವೆ, ಹೀಗಾಗಿ ಸೂಕ್ತ ಪ್ರಕ್ರಿಯೆಯ ಕೊರತೆಯಿದೆ ಎಂದು ಹೇಳಿದ್ದಾರೆ. ವಿಶ್ವ ಮಾನವ ಹಕ್ಕುಗಳ ಮಂಡಳಿಯ ಸದಸ್ಯನಾಗಿ ಭಾರತವು ಮಾನವ ಹಕ್ಕುಗಳನ್ನು ಗೌರವಿಸುತ್ತದೆ ಮತ್ತು ಹಕ್ಕುಗಳ ಕುರಿತು ಅದರ ವ್ಯಾಖ್ಯಾನಗಳು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿಗೆ ಅನುಗುಣವಾಗಿದೆ ಎನ್ನುವುದನ್ನು ಖಚಿತಪಡಿಸಲು ತಾನು ಆಸಕ್ತನಾಗಿದ್ದೇನೆ ಎಂದು ಅವರು ಪ್ರತಿಪಾದಿಸಿದ್ದಾರೆ.
ದಂಡನಾತ್ಮಕ ಕಾರಣಗಳಿಗಾಗಿ ಉದ್ದೇಶಪೂರ್ವಕವಾಗಿ ನಡೆಸಲಾದ ನಿರಂಕುಶ ನೆಲಸಮ ಕಾರ್ಯಾಚರಣೆಗಳು,ವಿಶೇಷವಾಗಿ ಅವು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಾಗ ಅಥವಾ ಅವರ ವಿರುದ್ಧ ತಾರತಮ್ಯದ ಪರಿಣಾಮಗಳಿಗೆ ಕಾರಣವಾದಾಗ ಮಾನವ ಹಕ್ಕುಗಳ ಉಲ್ಲಂಘನೆಯ ಉಲ್ಬಣಿತ ರೂಪಗಳಾಗಿವೆ. ನೆಲಸಮ ಕಾರ್ಯಾಚರಣೆಗಳು ನಿರಾಶ್ರಿತತೆಗೆ ಕಾರಣವಾದಾಗ ಅವು ಕ್ರೌರ್ಯ,ಅಮಾನವೀಯತೆ,ಅವಮಾನಕಾರಿಯಾಗಿ ನಡೆಸಿಕೊಳ್ಳುವಿಕೆ ಅಥವಾ ಶಿಕ್ಷೆಯ ವಿರುದ್ಧ ನಿಷೇಧವನ್ನು ಉಲ್ಲಂಘಿಸಬಹುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮನೆಗಳನ್ನು ನೆಲಸಮಗೊಳಿಸುವುದು ಕಾನೂನುಬಾಹಿರವಲ್ಲ. ಮನೆಗಳು ಅನಧಿಕೃತವಾಗಿ ನಿರ್ಮಾಣಗೊಂಡಿದ್ದರೆ ಕಾನೂನು ಮತ್ತು ಕಾರ್ಯವಿಧಾನ ಸುರಕ್ಷತೆಗಳಿಗೆ ಅನುಗುಣವಾಗಿ ಅವುಗಳನ್ನು ಕೆಡವಬಹುದು. ಆದರೆ ಮನೆಗಳನ್ನು ನೆಲಸಮಗೊಳಿಸುವುದು ಜನರನ್ನು ನಿರ್ವಸಿತರನ್ನಾಗಿ ಮಾಡುವುದರಿಂದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯವಾಗಿದೆ. ಇಂತಹ ಮಾನದಂಡಗಳು ಕೆಲವರನ್ನು ಮಾತ್ರ ಗುರಿಯಾಗಿಸಿಕೊಳ್ಳದೆ ತಾರತಮ್ಯರಹಿತವಾಗಿ ಕಾನೂನುಗಳ ಅನ್ವಯ,ಸಾಕಷ್ಟು ಪೂರ್ವಭಾವಿಯಾಗಿ ನೋಟಿಸ್ ಮತ್ತು ಮೇಲ್ಮನವಿ ಸಲ್ಲಿಸುವ ಹಕ್ಕು,ಬಲವಂತದಿಂದ ಒಕ್ಕಲೆಬ್ಬಿಸುವುದನ್ನು ತಪ್ಪಿಸುವುದು ಮತ್ತು ಸಾಕಷ್ಟು ಹಾಗೂ ನ್ಯಾಯಸಮ್ಮತ ಪರಿಹಾರವನ್ನು ಒಳಗೊಂಡಿರುತ್ತವೆ ಎಂದು ಅರ್ಜಿಯಲ್ಲಿ ಒತ್ತಿ ಹೇಳಲಾಗಿದೆ.
ನಿರಂಕುಶವಾಗಿ ಮನೆಗಳನ್ನು ನೆಲಸಮಗೊಳಿಸುವುದು ಭದ್ರತೆ,ಶಾಂತಿ ಮತ್ತು ಘನತೆಯಲ್ಲಿ ಬದುಕುವ ಹಕ್ಕಿನ ಉಲ್ಲಂಘನೆಯಾಗುತ್ತದೆ ಮತ್ತು ಇಂತಹ ಕಾರ್ಯಾಚರಣೆಗಳಿಂದಾಗಿ ಜನರು ನಿರ್ವಸಿತರಾದಾಗ ಅವರು ಸಂಪೂರ್ಣ ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ ಎಂದು ಮಧ್ಯಸ್ಥಿಕೆ ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.