ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು, ನ.13: ಮದ್ಯಪ್ರದೇಶ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಬೇಕಾಗಿರುವುದರಿಂದ ನ.15ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪದಗ್ರಹಣ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನ.15ರಂದು ಅಧಿಕಾರ ಸ್ವೀಕಾರ ಮಾಡುತ್ತಿದ್ದಾರೆ. ರಾಜ್ಯಾದ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರು ನನಗೆ 2 ಬಾರಿ ಕರೆ ಮಾಡಿ ಮಾತನಾಡಿದ್ದಾರೆ. ಕಾರ್ಯಕ್ರಮಕ್ಕೆ ಆಹ್ವಾನವನ್ನೂ ನೀಡಿದ್ದಾರೆ. ಆದರೆ ನ.15ಕ್ಕೆ ನಾನು ರಾಜ್ಯದಲ್ಲಿ ಇರುವುದಿಲ್ಲ. ಮಧ್ಯಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ನಾನು ಅಲ್ಲಿ ಕ್ಯಾಂಪೇನ್‍ಗೆ ಹೋಗಬೇಕಿದೆ. ರಾತ್ರಿವರೆಗೂ ಕ್ಯಾಂಪೇನ್ ಇರುವುದರಿಂದ ನನಗೆ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ಎಂದು ವಿಜಯೇಂದ್ರ ಅವರಿಗೆ ಹೇಳಿದ್ದೇನೆ. ಆದ್ದರಿಂದ ನಾನು ಪದಗ್ರಹಣ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದರು.
ರಾಜ್ಯಾಧ್ಯಕ್ಷರ ಸ್ಥಾನ ಎನ್ನುವುದು ಒಂದು ಸ್ಥಾನ, ಅದಕ್ಕೆ ಕೊಡಬೇಕಾದ ಗೌರವವನ್ನು ಕೊಟ್ಟೇ ಕೊಡಿತ್ತೇವೆ. ನ್ಯಾಯಪೀಠ ಬದಲಾಗಲ್ಲ, ನ್ಯಾಯಾಧೀಶರು ಬದಲಾಗುತ್ತಾರೆ, ನ್ಯಾಯಪೀಠಕ್ಕೆ ಎಲ್ಲರೂ ಗೌರವ ಕೊಡಬೇಕು, ನಾವೂ ಗೌರವ ಕೊಡುತ್ತೇವೆ. ನಾನು ಪಕ್ಷದ ಲಕ್ಷ್ಮಣ ರೇಖೆಯನ್ನೂ ಎಂದೂ ದಾಟಿಲ್ಲ. 20ವರ್ಷ ಶಾಸಕನಾಗಿದ್ದೆ. 35 ವರ್ಷ ಕಾರ್ಯಕರ್ತನಾಗಿದ್ದೆ. ಈ ಅವಧಿಯಲ್ಲಿ ಒಮ್ಮೆಯೂ ಪಕ್ಷದ ಲಕ್ಷ್ಮಣರೇಖೆಯನ್ನು ಎಂದೂ ದಾಟಿಲ್ಲ. ಜಗಳವಾಡಿದ್ದರೂ ಪಕ್ಷದೊಳಗೆ ಜಗಳ ಆಡಿದ್ದೇವೆ. ಈ ಜಗಳ ನಮ್ಮ ಮನೆಯೊಳಗಿನ ಜಗಳ. ಬೇರೆಯವರ ಮನೆಯಲ್ಲಿ ಕೂತು, ನಮ್ಮ ಮನೆಯ ಸಮಸ್ಯೆ ಬಗೆಹರಿಸಿ ಎಂದು ಯಾವತ್ತೂ ಕೇಳಿಲ್ಲ. ನಮ್ಮ ಮನೆಯ ಸಮಸ್ಯೆಯನ್ನು ಬಗೆಹರಿಸಿ ಎಂದು ಮನೆಯೊಳಗಿದ್ದುಕೊಂಡೇ ಕೇಳೋದು. ನಮ್ಮ ನಡುವೆ ಭಿನ್ನಾಭಿಪ್ರಾಯ ಏನೇ ಇದ್ದರೂ ನಮ್ಮ ಗುರು ಒಂದೇ, ಕೇಂದ್ರದಲ್ಲಿ ಮೋದಿ ಸರಕಾರ ಮತ್ತೆ ಬರಬೇಕು ಎನ್ನುವುದೇ ನಮ್ಮ ಗುರಿ ಎಂದರು.
ಬೇರೆ ಪಕ್ಷ ಸೇರುತ್ತೀರ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಬೇಡ ಎಂದು ಅನಿಸಿದರೆ ಬಿಜೆಪಿ ಬಿಟ್ಟು ಇರುತ್ತೇನೆಯೇ ಹೊರತು ಬೇರೆ ಪಕ್ಷ ಸೇರಿ ರಾಜಕೀಯ ಮಾಡುವುದೇ ಇಲ್ಲ. ರಾಜಕೀಯ ಬಿಟ್ಟರೂ ನಾನು ಬೇರೆ ಪಕ್ಷಕ್ಕೆ ಮತ ಕೇಳಲೂ ಆಗುವುದಿಲ್ಲ. ಬಿಜೆಪಿ ಪಕ್ಷಕ್ಕೇ ಮತ ಕೇಳಬೇಕು. ಯಾವ ಜವಬ್ದಾರಿ ಇಲ್ಲದಿದ್ದರೂ ಶಕ್ತಿ ಮೀರಿ ಮೋದಿಗಾಗಿ ಬಿಜೆಪಿಗೆ ಮತ ಕೇಳುತ್ತೇನೆ ಎಂದ ಅವರು, ನನಗೆ ಅಧಿಕಾರ ಕೊಟ್ರೆ ಮಾತ್ರ ಬಿಜೆಪಿ, ಕೊಡದಿದ್ದರೆ ಬಿಜೆಪಿ ಬೇಡ ಎಂದು ನಾನು ಹೇಳಲ್ಲ. ಬಿಜೆಪಿ ಸೇರಿದಾಗಿನಿಂದ ಓಟು ನೀಡಿರುವುದು ಬಿಜೆಪಿಗೆ, ಓಟು ಕೇಳಿರುವುದೂ ಬಿಜೆಪಿಗೇ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೀಡಿರುವ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರಿತಿಕ್ರಿಯಿಸಲು ನಿರಾಕರಿಸಿದ ಸಿ.ಟಿ.ರವಿ, ನಾನು ಎಲ್ಲರ ಹೇಳಿಕೆಗೂ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಹೇಳಿಕೆಗೆ ನಾನೇನು ಹೇಳಲು ಆಗುವುದಿಲ್ಲ. ಅದು ಅವರ ಭಾವನೆ, ಅದನ್ನವರು ಹೇಳಿದ್ದಾರೆ. ಅವರು ರಾಜ್ಯ ಸುತ್ತಬಹುದು, ಅವರಿಗೆ ಸಾಮಥ್ರ್ಯ ಇದೆ, ಸುತ್ತಲಿ ಬಿಡಿ ಎಂದರು.