ಕಟುಕರಿಗೆ ಕಣ್ಣೀರು ಬರೋಕೆ ಸಾಧ್ಯವೇ ಇಲ್ಲ : ಕಾಂಗ್ರೆಸ್ ವಿರುದ್ಧ ಎಚ್ಡಿಕೆ ಆಕ್ರೋಶ
ಎಚ್.ಡಿ.ಕುಮಾರಸ್ವಾಮಿ
ಮೈಸೂರು: ಚನ್ನಪಟ್ಟಣ ಉಪಚುನಾವಣಾ ಕಣ ರಂಗೇರಿದ್ದು, ಪ್ರಚಾರದ ವೇಳೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದನ್ನು ಟೀಕಿಸಿದ್ದ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಶನಿವಾರ ಭೇಟಿ ನೀಡಿ, ಪೂಜೆ ಸಲ್ಲಿಸಿ ನಂತರ ಮಾಧ್ಯಮವರೊಂದಿಗೆ ಮಾತನಾಡಿದ ಅವರು, "ಕಣ್ಣೀರ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡುತ್ತಿದೆ. ಜನರ ಸಮಸ್ಯೆ ನೋಡಿದಾಗ ಕಣ್ಣಲ್ಲಿ ನೀರುಬಂದಿದೆ. ಈ ಚುನಾವಣೆಯಲ್ಲಿ ನಾನು ಕಣ್ಣೀರು ಹಾಕಿದ್ದೀನಾ. ಕಣ್ಣೀರು ಹಾಕೋದು ಗಿಮಿಕ್ ಅಲ್ಲ. ಕಟುಕರಿಗೆ ಕಣ್ಣೀರು ಬರೋಕೆ ಸಾಧ್ಯವೇ ಇಲ್ಲ" ಎಂದು ಕಿಡಿಕಾರಿದರು.
ʼಕ್ಷೇತ್ರದ ಜನರ ಆಶೀರ್ವಾದಿಂದ ನಿಖಿಲ್ ಗೆಲ್ಲುತ್ತಾರೆ. ಪಕ್ಷದ ಹಿತದೃಷ್ಟಿಯಿಂದ ನಿಖಿಲ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ಗೆ ಈ ಬಾರಿ ಗೆಲ್ಲಲು ಸಾಧ್ಯವಾಗುವುದಿಲ್ಲʼ ಎಂದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಚನ್ನಪಟ್ಟಣದಲ್ಲಿ ಪ್ರಚಾರದಿಂದ ದೂರ ಉಳಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ʼಜಿ.ಟಿ.ದೇವೇಗೌಡರಿಗೆ ಕ್ಷೇತ್ರದಲ್ಲಿ ಬಹಳಷ್ಟು ಕೆಲಸ ಇದೆ. ಹಾಗಾಗಿ ಅವರು ಪ್ರಚಾರದಲ್ಲಿ ಭಾಗವಹಿಸುತ್ತಿಲ್ಲ. ಆದರೂ ಅವರು ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಸಹಕರಿಸುತ್ತಾರೆʼ ಎಂದರು.