ಭೂ ಹಗರಣ ಪ್ರಕರಣ | ವಿಚಾರಣೆಗೆ ತಡೆ ನೀಡಲು ʼಸುಪ್ರೀಂʼ ನಕಾರ; ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ

ಎಚ್.ಡಿ.ಕುಮಾರಸ್ವಾಮಿ
ಹೊಸದಿಲ್ಲಿ: ಭೂ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ತಡೆ ನೀಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಆರ್ಥಿಕ ಲಾಭಕ್ಕಾಗಿ ಡಿ ನೋಟಿಫಿಕೇಶನ್ ಮಾಡಿದ ಭೂ ಹಗರಣ ಪ್ರಕರಣದಲ್ಲಿ ಕೇಂದ್ರ ಸಚಿವರ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯವು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತಾ ಮತ್ತು ರಾಜೇಶ್ ಬಿಂದಲ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಅಕ್ರಮ ಡಿನೋಟಿಫಿಕೇಶನ್ ಮತ್ತು ಅಧಿಕಾರ ದುರುಪಯೋಗ ಆರೋಪವನ್ನು ವಿಚಾರಣೆ ಇಲ್ಲದೆ ಬಿ ರಿಪೋರ್ಟ್ ಹಾಕಲು ಸಾಧ್ಯವಿಲ್ಲವೆಂದು ನ್ಯಾಯಲಯವು ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದೆ.
ಪ್ರಕರಣವು ಬೆಂಗಳೂರಿನ ಬನಶಂಕರಿ 5ನೇ ಹಂತದ ಹಳ್ಳಗೆ ವಡೇರಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 128 ಮತ್ತು 137 (ಒಟ್ಟು 2 ಎಕರೆ 24 ಗುಂಟೆ) ಅಕ್ರಮ ಡಿ ನೋಟಿಫಿಕೇಶನ್ಗೆ ಸಂಬಂಧಿಸಿದೆ. 1997ರ ಸೆಪ್ಟೆಂಬರ್ 12ರಂದು ಕರ್ನಾಟಕ ಸರ್ಕಾರ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. 1998ರ ಎಪ್ರಿಲ್ 28 ರಂದು ಈ ಕುರಿತು ಆದೇಶ ನೀಡಲಾಯಿತು. 1999ರ ಸಪ್ಟೆಂಬರ್ 29ರಂದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಗೆ ಜಾಗವನ್ನು ಅಭಿವೃದ್ಧಿ ಯೋಜನೆಗಳಿಗಾಗಿ ಹಸ್ತಾಂತರಿಸಲಾಯಿತು. ಈ ಮಧ್ಯೆ ಭೂಮಿಯ ಮೂಲ ಮಾಲಕರಾಗಿದ್ದ ಪದ್ಮಾ ಎಂಬವರು, ಭೂಮಿಯನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ್ದರು.
ಕಾನೂನು ಬಾಹಿರವಾಗಿ ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ ಪದ್ಮಾ ಅವರು ಆಗಿನ ಮುಖ್ಯಮಂತ್ರಿಯವರ ಬಳಿ ಭೂಮಿಯನ್ನು ಡಿನೋಟಿಫೈ ಮಾಡುವಂತೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ 2005ರ ಡಿಸೆಂಬರ್ 30ರಂದು, ಭೂಮಿಯು ತನ್ನ ಸ್ವಾಧೀನದಲ್ಲಿರುವುದರಿಂದ, ಡಿನೋಡಿಫೈ ಪ್ರಸ್ತಾವನೆಗೆ ಬಿಡಿಎ ತೀವ್ರ ವಿರೋಧ ವ್ಯಕ್ತಪಡಿಸಿತು. 2007ರ ಅಕ್ಟೋಬರ್ 10ರಂದು ಆಗಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು, ಭೂಮಿಯನ್ನು ಡಿನೋಟಿಫಿಕೇಶನ್ ಮಾಡುವ ಸಮಿತಿಯ ಮುಂದಿಡದೇ ಏಕಪಕ್ಷೀಯವಾಗಿ ಡಿನೋಟಿಫಿಕೇಶನ್ ಮಾಡಲು ಆದೇಶಿಸಿದರು. ಈ ಅಕ್ರಮ ಡಿನೋಟಿಫಿಕೇಶನ್ ಆದ ಬಳಿಕ 2010ರ ಮಾರ್ಚ್ 10ರಂದು ಭೂಮಿಯನ್ನು 4.14 ಕೋಟಿ ರೂ.ಗೆ ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಲಾಯಿತು.
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಈ ಕುರಿತು 2012ರ ಜುಲೈ 4ರಂದು ಎಚ್ ಡಿ ಕುಮಾರಸ್ವಾಮಿಯವರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿತ್ತು. ನ್ಯಾಯಾಲಯವು ಪ್ರಕರಣವನ್ನು ತನಿಖೆ ಮಾಡುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿತ್ತು. ಅದರಂತೆ ಕುಮಾರಸ್ವಾಮಿಯವರ ವಿರುದ್ಧ ಜುಲೈ 10, 2012ರಂದು IPC ಸೆಕ್ಷನ್ 120 ಬಿಯಡಿ 420, 463, 468, 471 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 13 1c, 13 1dಯ ಅಡಿ ಆರೋಪಗಳನ್ನು ಹೊರಿಸಿ ಲೋಕಾಯುಕ್ತ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದರು.
ಲೋಕಾಯುಕ್ತ ಪೊಲೀಸ್ ದಾಖಲಿಸಿದ್ದ ಎಫ್ ಐ ಆರ್ ಪ್ರಶ್ನಿಸಿ ಎಚ್ ಡಿ ಕುಮಾರಸ್ವಾಮಿಯವರು ಹೈಕೋರ್ಟ್ ಮೊರೆ ಹೋಗಿದ್ದರು. 2015ರ ಜುಲೈ 27ರಂದು ಹೈಕೋರ್ಟ್ ತನ್ನ ಆದೇಶದಲ್ಲಿ ಎಫ್ ಐ ಆರ್ ರದ್ದುಪಡಿಸಲು ನಿರಾಕರಿಸಿತ್ತು. ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಅಕ್ಟೋಬರ್ 3, 2016ರಂದು ತಳ್ಳಿಹಾಕಿತ್ತು.
ಆ ಬಳಿಕ ಮೇ 23, 2018ರಿಂದ ಜುಲೈ 23, 2019ರ ಅವಧಿಯಲ್ಲಿ ಕುಮಾರಸ್ವಾಮಿಯವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ತಮ್ಮ ಪ್ರಭಾವ ಬಳಸಿ ಪ್ರಕರಣವನ್ನು ಮುಕ್ತಾಯಗೊಳಿಸುವ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು ಎನ್ನಲಾಗಿದೆ.
2019ರ ಸಪ್ಟೆಂಬರ್ 4 ರಂದು ಜನಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಬಿ ರಿಪೋರ್ಟ್ ತಿರಸ್ಕರಿಸಿ, ಎಚ್ ಡಿ ಕುಮಾರಸ್ವಾಮಿಯವರಿಗೆ ವಿಚಾರಣೆಗೆ ಆದೇಶ ನೀಡಿದ್ದರು. ಹೈಕೋರ್ಟ್ನಲ್ಲಿ ಸಮನ್ಸ್ ಪ್ರಶ್ನಿಸಿದಾಗ, ಪ್ರಕರಣ ಗಂಭೀರವಾಗಿದ್ದು, ಈ ಹಂತದಲ್ಲಿ ವಿಚಾರಣೆಗೆ ತಡೆ ನೀಡಲು ನ್ಯಾಯಾಲಯವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿತ್ತು.
ತಮ್ಮ ವಕೀಲ ಮುಕುಲ್ ರೋಹ್ಟಗಿಯವರ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಕುಮಾರಸ್ವಾಮಿಯವರು 1988 ರ ಭ್ರಷ್ಟಾಚಾರ ತಡೆ ಕಾಯ್ದೆಯ 2018 ರ ತಿದ್ದುಪಡಿಯನ್ನು ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.
ಈ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಆರೋಪಗಳ ಗಂಭೀರತೆ ಹಾಗೂ ಮುಖ್ಯಮಂತ್ರಿ ಹುದ್ದೆಯನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿರುವುದನ್ನು ಗಮನಿಸಿ, ಅರ್ಜಿಯನ್ನು ತಿರಸ್ಕರಿಸಿತು.
ಪ್ರಕರಣದಿಂದ ರಕ್ಷಣೆ ಪಡೆಯಲು 2018 ರ ತಿದ್ದುಪಡಿಯನ್ನು ಬಳಸಲು ಸಾಧ್ಯವಿಲ್ಲ. ಪ್ರಕರಣವು ತಿದ್ದುಪಡಿ ಜಾರಿಗೆ ಬರುವ ಮೊದಲು ನಡೆದಿದೆ. ಎಂದು ಕರ್ನಾಟಕ ಸರಕಾರದ ಪರವಾಗಿ ಸುಪ್ರೀಕೋರ್ಟ್ ಹಿರಿಯ ವಕೀಲ ಹರಿನ್ ರಾವಲ್, ಅಸಿಸ್ಟೆಂಟ್ ಅಡ್ವೊಕೇಟ್ ಜನರಲ್ ಅಮನ್ ಪವಾರ್ ವಾದ ಮಂಡಿಸಿದ್ದರು.