50 ಕೋಟಿ ರೂ. ಹಣಕ್ಕೆ ಬೇಡಿಕೆ, ಜೀವ ಬೆದರಿಕೆ ಆರೋಪ: ಎಚ್.ಡಿ.ಕುಮಾರಸ್ವಾಮಿ ಸೇರಿ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು: 50 ಕೋಟಿ ರೂ. ಹಣಕ್ಕೆ ಬೇಡಿಕೆ ಹಾಗೂ ಜೀವ ಬೆದರಿಕೆ ಆರೋಪದಡಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್‌ಗೌಡ ಎಂಬುವರ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬುವರು ನೀಡಿದ ದೂರಿನನ್ವಯ ಎಚ್.ಡಿ.ಕುಮಾರಸ್ವಾಮಿ ಹಾಗೂ ರಮೇಶ್‌ಗೌಡ ವಿರುದ್ಧ ಅಮೃತಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
‘2019ರ ಮಂಡ್ಯ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಪರವಾಗಿ ಅಭಿಯಾನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೈಗೊಂಡಿದ್ದು ಇದಕ್ಕೆ ವೈಯಕ್ತಿಕವಾಗಿ ಕೋಟ್ಯಂತರ ರೂ. ಖರ್ಚು ಮಾಡಿದ್ದೇನೆ. ಮಾಜಿ ಎಂಎಲ್‌ಸಿ ರಮೇಶ್ ಗೌಡ ಅವರು 2024ರ ಆ.24ರಂದು ನಮ್ಮ ಮನೆಗೆ ಬಂದು ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡುವುದು ಅಂತಿಮವಾಗಿದೆ ಎಂದು ಪ್ರಸ್ತಾಪಿಸಿ ಎಚ್.ಡಿ.ಕುಮಾರಸ್ವಾಮಿಗೆ ಕರೆ ಮಾಡಿಸಿ ಮಾತನಾಡಿದರು. ಅದೇ ವೇಳೆ, ಎಚ್.ಡಿ.ಕುಮಾರಸ್ವಾಮಿ ಅವರು ಉಪ ಚುನಾವಣೆಗಾಗಿ 50 ಕೋಟಿ ರೂ. ಹಣ ನೀಡುವಂತೆ ನನ್ನನ್ನು ಕೇಳಿದ್ದರು. ನಾನು ಹಣ ಕೊಡಲಾಗದು ಎಂದಿದ್ದಕ್ಕೆ ಕೋಪಿಸಿಕೊಂಡಿದ್ದರು’ ಎಂದು ವಿಜಯ್ ಟಾಟಾ ದೂರಿನಲ್ಲಿ ತಿಳಿಸಿದ್ದಾರೆ.
‘ಚನ್ನಪಟ್ಟಣ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದ್ದು, ಗೆಲುವು ನಮಗೆ ಅನಿವಾರ್ಯವಾಗಿದೆ. ಹಾಗಾಗಿ 50 ಕೋಟಿ ರೂ. ಹಣವನ್ನು ಹೊಂದಿಸಿಕೊಡಬೇಕು. ಒಂದು ವೇಳೆ ಹಣ ಹೊಂದಿಸಿ ಕೊಡದಿದ್ದರೆ ನಾನು ಏನು ಮಾಡುತ್ತೇನೋ ಗೊತ್ತಿಲ್ಲ. ನೀನು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುವುದಷ್ಟೇ ಅಲ್ಲ. ಇಲ್ಲಿ ನೀನು ಬದುಕುವುದೇ ಕಷ್ಟವಾಗುತ್ತದೆಂದು ಎಚ್.ಡಿ.ಕುಮಾರಸ್ವಾಮಿ ಬೆದರಿಕೆ ಹಾಕಿರುವುದಾಗಿ’ ವಿಜಯ್ ಟಾಟಾ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಅಲ್ಲದೆ, ‘ರಮೇಶ್ ಗೌಡ ಅವರು ಕೂಡ ಹಣಕ್ಕಾಗಿ ನನಗೆ ಕರೆ, ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ. ಹಣ ನೀಡದಿದ್ದರೆ ನಿಮಗೆ ತೊಂದರೆ ಎದುರಾಗುತ್ತದೆಂದು ಧಮ್ಕಿ ಹಾಕಿದ್ದಾರೆ. ಈ ಹಿನ್ನೆಲೆ ಎಚ್.ಡಿ.ಕುಮಾರಸ್ವಾಮಿ ಮತ್ತು ರಮೇಶ್ ಗೌಡ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಿ ನಮ್ಮ ಕುಟುಂಬಕ್ಕೆ ಭದ್ರತೆ ರಕ್ಷಣೆ ಒದಗಿಸಬೇಕು’ ಎಂದು ವಿಜಯ್ ಟಾಟಾ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.