ದೇಶದ 80 ಕೋಟಿ ಜನಕ್ಕೆ ಉಚಿತ ಆಹಾರ ಧಾನ್ಯ ವಿತರಣೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹೊಸದಿಲ್ಲಿ: ಕೇಂದ್ರ ಸರಕಾರ ದೇಶದ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಿಸುತ್ತಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಗುರುವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಮತ್ತು ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯಡಿ ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದರು.
‘2019ರಲ್ಲಿ ಶುರುವಾದ ‘ಒಂದು ರಾಷ್ಟ್ರ ಒಂದು ಪಡಿತರ ಚೀಟಿ’ ಯೋಜನೆಯಡಿ ಸುಮಾರು 145 ಕೋಟಿ ವಹಿವಾಟು ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಇನ್ನೂ 5 ವರ್ಷಗಳ ವರೆಗೆ ವಿಸ್ತರಿಸಿದ್ದು, ಇದರ ಬಜೆಟ್ 11.80ಲಕ್ಷ ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಭರಿಸಲಿದೆ ಎಂದು ವಿವರಿಸಿದರು.
497 ಲಕ್ಷ ಮೆ.ಟನ್ ಆಹಾರ ಧಾನ್ಯ ವಿತರಣೆ: 2023-24ರಲ್ಲಿ ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯಡಿ, ಸುಮಾರು 81.35 ಕೋಟಿ ಫಲಾನುಭವಿಗಳಿಗೆ 497ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯ ವಿತರಿಸಲಾಗಿದೆ ಎಂದ ಅವರು, ಪ್ರಧಾನಿ ಮೋದಿ ನೇತೃತ್ವದಲ್ಲಿ ಎಥೆನಾಲ್ ಉತ್ಪಾದನಾ ಸಾಮಥ್ರ್ಯ 1,589 ಕೋಟಿ ಲೀ.ಗೆ ಏರಿದೆ. ಭಾರತದ ದೇಶೀಯ ಅಗತ್ಯಗಳನ್ನು ಪೂರೈಸಲು ಸಾಕಾಗುವಷ್ಟಿದೆ ಎಂದರು.