ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಿಸಲು ಕೇಂದ್ರ ಸರಕಾರಕ್ಕೆ ಒತ್ತಾಯ : ಸಿಎಂ ಸಿದ್ದರಾಮಯ್ಯ
ವಿಜಯಪುರ : ಕೃಷ್ಣಾ ನ್ಯಾಯಾಧೀಕರಣ ತೀರ್ಪಿನನ್ವಯ ರಾಜ್ಯಕ್ಕೆ 130 ಟಿಎಂಸಿ ನೀರು ಹೆಚ್ಚುವರಿ ದೊರೆಯಲಿದ್ದು, ಇದಕ್ಕಾಗಿ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವ ಕುರಿತು ಅಧಿಸೂಚನೆ ಹೊರಡಿಸಲು ಈಗಾಗಲೇ ಕೇಂದ್ರ ಸರಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ಆಲಮಟ್ಟಿ ಜಲಾಶಯದ ಬಳಿ ಕೃಷ್ಣೆಯ ಜಲಧಿಗೆ ಗಂಗಾ ಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಲಮಟ್ಟಿ ಜಲಾಶಯದ ಈಗಿನ ಎತ್ತರ 519.60 ಮೀಟರ್ ನಿಂದ 524.25 ಮೀಟರ್ ಎತ್ತರಕ್ಕೆ ಹೆಚ್ಚಿಸಬೇಕಾಗಿದೆ. ಆದರೆ ಇದಕ್ಕೆ ಕೇಂದ್ರ ಸರಕಾರದ ಅಧಿಸೂಚನೆ ಆಗರುವುದರಿಂದ ಎತ್ತರವನ್ನು ಹೆಚ್ಚಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಕೇಂದ್ರವು, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯಗಳೊಂದಿಗೆ ಚರ್ಚೆ ನಡೆಸಿ ಇತ್ಯರ್ಥ ಮಾಡಿಸುವುದು ಅಗತ್ಯವಿದೆ ಎಂದರು.
ಇನ್ನೂ, ಕೃಷ್ಣಾ ನ್ಯಾಯಾಧೀಕರಣ-2ರ ಅಂತಿಮ ತೀರ್ಪಿಗೆ ಕೇಂದ್ರದಿಂದ ಗೆಜೆಟ್ ಅಧಿಸೂಚನೆ ಹೊರಡಿಸಲು ನಾನು ಮತ್ತು ಉಪಮುಖ್ಯಮಂತ್ರಿ ಅವರು ಈಗಾಗಲೇ ಪ್ರಧಾನಮಂತ್ರಿ ಅವರನ್ನು ಹಾಗೂ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ನಾವು ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಸಿದ್ದರಿದ್ದೇವೆ. ನಮ್ಮ ಹಿಂದಿನ ಅವಧಿಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ 51,148 ಕೋಟಿ ರೂ.ಗಳ ಅಂದಾಜಿಗೆ ಅನುಮೋದನೆ ನೀಡಲಾಗಿತ್ತು. ಈಗ ಈ ಮೊತ್ತ 80 ಸಾವಿರ ಕೋಟಿ ರೂ.ಗಳಷ್ಟಾಗಬಹುದು ಎಂಬ ಅಂದಾಜಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಪ್ರತಿ ವರ್ಷ ನಮ್ಮ ಸರಕಾರ 20 ಸಾವಿರ ಕೋಟಿ ರೂ. ಖರ್ಚು ಮಾಡುವ ಮೂಲಕ, 5 ವರ್ಷಕ್ಕೆ ಅಂದಾಜು 1 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಬೇಕೆಂಬುದು ನಮ್ಮ ಸರಕಾರ ಉದ್ದೇಶಿಸಿದೆ. ಆದರೆ ಇದಕ್ಕೆ ಮೊದಲು ಕೇಂದ್ರದ ನೋಟಿಫಿಕೇಷನ್ ಆಗಬೇಕಿರುವುದರಿಂದ, ಪ್ರಧಾನಮಂತ್ರಿಗಳ ಮಧ್ಯಸ್ಥಿಕೆಯಲ್ಲಿ ನಿರ್ಣಯವಾದರೆ, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಯೋಜನೆಗೆ ನಾವು ಚಾಲನೆ ನೀಡಬಹುದು ಎಂದು ಸಿದ್ದರಾಮಯ್ಯ ವಿವರಿಸಿದರು.
ಜಲಾಶಯದಲ್ಲಿ ಹೂಳು ತುಂಬಿರುವ ಪ್ರಮಾಣ, ನೀರಿನ ಸಾಮರ್ಥ್ಯ, ಇದರಿಂದ ರೈತರಿಗಾಗಬಹುದಾದ ತೊಂದರೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದ ಅವರು, ತುಂಗಭದ್ರಾ ಜಲಾಶಯದಲ್ಲಿ 19ನೆ ಕ್ರಸ್ಟ್ ಗೇಟ್ ಅಳವಡಿಕೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
ದುರಸ್ತಿಯ ಅವಧಿಯಲ್ಲಿ 35 ಟಿಎಂಸಿ ನೀರು ಮಾತ್ರ ಪೋಲಾಗಿದೆ. ಇಂದಿಗೂ ಜಲಾಶಯದಲ್ಲಿ ಸುಮಾರು 78 ಟಿಎಂಸಿ ನೀರಿದೆ. ಇನ್ನೂ 20 ಟಿಎಂಸಿ ನೀರು ಹರಿದುಬಂದರೆ, ಜಲಾಶಯ ಶೇ.95 ರಷ್ಟು ಭರ್ತಿಯಾಗುತ್ತದೆ. ಈಗಾಗಲೇ ಕರ್ನಾಟಕ, ತೆಲಂಗಾಣ, ಆಂಧ್ರದ ರೈತರ ಮೊದಲ ಬೆಳೆಗೆ ನೀರು ಬಿಡಲಾಗಿದೆ. ಆದ್ದರಿಂದ ರೈತರಿಗೆ ಯಾವುದೇ ಆತಂಕ ಬೇಡ ಎಂದು ಸಿದ್ದರಾಮಯ್ಯ ನುಡಿದರು.