ಪುರಷರಿಗೂ ʼಗ್ಯಾರಂಟಿʼ ಯೋಜನೆ ನೀಡುವಂತೆ ಒತ್ತಾಯ; ಬಸ್ಸಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿ ಪ್ರತಿಭಟಿಸಿದ ವಾಟಾಳ್ ನಾಗರಾಜ್
ʼʼಗೃಹಲಕ್ಷ್ಮಿ ಯೋಜನೆಯಂತೆ ‘ನಾರಾಯಣ’ ಯೋಜನೆ ಜಾರಿಗೆ ತನ್ನಿʼʼ
ಬೆಂಗಳೂರು, ಅ.22: ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಪುರಷರಿಗೂ ರಾಜ್ಯ ಸರಕಾರ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬಿಎಂಟಿಸಿ ಬಸ್‍ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿ ವಿನೂತನವಾಗಿ ಚಳವಳಿ ನಡೆಸಿದರು.
ರವಿವಾರ ಇಲ್ಲಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಆವರಣಕ್ಕೆ ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಕಾರ್ಯಕರ್ತರೊಂದಿಗೆ ಆಗಮಿಸಿದ ರಾಜ್ಯ ಸರಕಾರ ಮಹಿಳೆಯರಿಗೆ ಶಕ್ತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಪುರಷರಿಗೂ ಜಾರಿ ಮಾಡುವಂತೆ ಒತ್ತಾಯಿಸಿ ಬಿಎಂಟಿಸಿ ಬಸ್‍ನಲ್ಲಿ ಟಿಕೆಟ್ ಪಡೆಯದೆ ಪ್ರಯಾಣ ಮಾಡಲು ಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ‘ರಾಜ್ಯ ಸರಕಾರವು ಗ್ಯಾರೆಂಟಿ ಯೋಜನೆಗಳನ್ನು ಪುರುಷರಿಗೂ ನೀಡಬೇಕು. ಇದರಿಂದ ಅವರ ಆದಾಯದ ಗುಣಮಟ್ಟ ಹೆಚ್ಚಾಗಲಿದೆ. ಜೊತೆಗೆ ಮಾನಸಿಕ ಶಕ್ತಿಯು ಅವರಿಗೆ ತುಂಬಿದಂತೆ ಆಗಲಿದೆ’ ಎಂದು ಇದೇ ವೇಳೆ ಆಗ್ರಹಿಸಿದರು.
ಮನೆ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2ಸಾವಿರ ರೂಪಾಯಿ ಪ್ರತಿ ತಿಂಗಳು ನೀಡಲಾಗುತ್ತಿದೆ. ಅದೇ ರೀತಿ ಮನೆಯ ಯಜಮಾನನಿಗೂ ‘ನಾರಾಯಣ’ ಎನ್ನುವ ಹೆಸರಿನ ಅಡಿಯಲ್ಲಿ 2000 ರೂಪಾಯಿ ಜಾರಿ ಮಾಡಬೇಕು. ಶಕ್ತಿ ಯೋಜನೆಯ ಇದೇ ಮಾದರಿಯಲ್ಲಿ ಜಾರಿಗೆ ತರಬೇಕು ಎಂದು ಅವರು ಕೋರಿದರು.
ಐತಿಹಾಸಿಕ ಮೈಸೂರು ದಸರಾ ವೀಕ್ಷಿಸಲು ರಾಜ್ಯದ ಮೂಲೆ ಮೂಲೆಯಿಂದಲೂ ಮೈಸೂರಿಗೆ ಆಗಮಿಸಲಿದ್ದಾರೆ. ಬಸ್ ಪ್ರಯಾಣವಾಗಲಿ, ಗೃಹಲಕ್ಷ್ಮಿಯಾಗಲಿ ಬರೀ ಮಹಿಳೆಯರಿಗೆ ಮಾಡಿದ್ದೀರಿ. ಇದನ್ನು ನಾನು ವಿರೋಧಿಸುವುದಿಲ್ಲ. ಆದರೆ ಪುರುಷರಿಗೂ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಬೇಕೆಂದು ವಾಟಾಳ್ ಒತ್ತಾಯಿಸಿದರು.