ತೆರಿಗೆ ಸೋರಿಕೆ ತಡೆಗಟ್ಟಲು ತಂತ್ರಜ್ಞಾನ ಬಳಕೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಆಸ್ತಿ ತೆರಿಗೆ ಸೇರಿದಂತೆ ಇನ್ನಿತರ ಶುಲ್ಕಗಳನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡಲು ಹಾಗೂ ತೆರಿಗೆ ಸೋರಿಕೆ ತಡೆಗಟ್ಟಲು 3ಡಿ ಡ್ರೋನ್ ತಂತ್ರಜ್ಞಾನ ಬಳಸಿಕೊಂಡು ಸ್ವತ್ತುಗಳ ಮ್ಯಾಪಿಂಗ್ ಮತ್ತು ಮರು ಮೌಲ್ಯಮಾಪನ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಶುಕ್ರವಾರ ಬಜೆಟ್ ಮಂಡನೆ ಮಆಡಿದ ಅವರು, ‘ನಗರ ಪ್ರದೇಶಗಳಲ್ಲಿ ಆಸ್ತಿಗಳ ಅಕ್ರಮ ನೋಂದಣಿ ತಡೆಗಟ್ಟಲು ಹಾಗೂ ಆಸ್ತಿ ನೋಂದಣಿ ಮತ್ತು ಖಾತಾ ನಮೂದನ್ನು ಸರಳೀಕರಣಗೊಳಿಸಲು ಕಾವೇರಿ ಮತ್ತು ಇ-ಆಸ್ತಿ ತಂತ್ರಾಂಶಗಳ ಸಂಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ತೆರಿಗೆ ವಸೂಲಿಗೆ ಸ್ವಸಹಾಯ ಗುಂಪುಗಳ ಸೇವೆ ಪಡೆಯುವುದು, ನೇರಪಾವತಿ ಯೋಜನೆಯಡಿ ಖಾಯಂ ಮಾಡಿರುವ 24ಸಾವಿರ ಪೌರ ಕಾರ್ಮಿಕರ ಜೊತೆಗೆ ಉಳಿದವರನ್ನು ಹಂತ-ಹಂತವಾಗಿ ಖಾಯಂಗೊಳಿಸಲು ಕ್ರಮ ವಹಿಸಲಾಗುವುದು. ಯೋಜಿತ ನಗರೀಕರಣದ ಉದ್ದೇಶದಿಂದ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಸ್ಥಳೀಯ ಪ್ರಾಧಿಕಾರಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಗಳನ್ನಾಗಿ ಉನ್ನತಿಕರಿಸಲಾಗುವುದು ಎಂದು ಅವರು ತಿಳಿಸಿದರು.
‘ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಕಲಾಪಗಳನ್ನು ನೇರ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಮೈಸೂರಿನ ಪ್ರಖ್ಯಾತ ಲ್ಯಾನ್ಸ್‍ಡೌನ್ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿಯೇ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‍ನಲ್ಲಿ ಪ್ರಕಟಿಸಿದರು.