ಗೃಹಲಕ್ಷ್ಮಿ ಯೋಜನೆ ‘ಚುನಾವಣಾ ಲಕ್ಷ್ಮಿ’ಯಾಗಿದೆ : ವಿ.ಸುನೀಲ್ ಕುಮಾರ್

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯು ‘ಚುನಾವಣಾ ಲಕ್ಷ್ಮಿ’ ಆಗಿದೆ. ಲೋಕಸಭಾ ಚುನಾವಣೆ ಘೋಷಣೆಯಾಗುವ ಎರಡು, ಮೂರು ತಿಂಗಳು ಮುಂಚಿತವಾಗಿ ಹಣ ಖಾತೆಗಳಿಗೆ ಜಮೆಯಾಯಿತು. ಆನಂತರ, ಸ್ಥಗಿತವಾಯಿತು. ಈಗ ಪುನಃ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳು ಬರುತ್ತಿವೆ. ಆಗ ಮತ್ತೆ ಹಣ ಹಾಕುತ್ತಾರೆ ಎಂದು ಬಿಜೆಪಿ ಸದಸ್ಯ ವಿ.ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.
ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಮೇಲೆ ಮಾತನಾಡಿದ ಅವರು, ಕಳೆದ ಸಾಲಿನ ರಾಜ್ಯಪಾಲರ ಭಾಷಣದಲ್ಲಿ ಬರ ಪರಿಹಾರ ಹಾಗೂ ಗ್ಯಾರಂಟಿ ಯೋಜನೆಗಳು ಜನರ ಹಕ್ಕು ಎಂದು ಸರಕಾರ ಹೇಳಿಸಿತ್ತು. ಆದರೆ, ಇಂಧನ ಸಚಿವರು ‘ಗೃಹಲಕ್ಷ್ಮಿ’ ಹಣ ಸಂಬಳವೇ? ಪ್ರತಿ ತಿಂಗಳು ಹಾಕಲು ಎನ್ನುತ್ತಾರೆ. ನಾಲ್ಕು ತಿಂಗಳಿಂದ ಗೃಹ ಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗದಿರುವುದು ಮುಖ್ಯಮಂತ್ರಿ ಗಮನಕ್ಕೆ ಬಂದಿಲ್ಲವಂತೆ ಎಂದು ಟೀಕಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಇದು ನಮ್ಮ ಸರಕಾರದ ಗ್ಯಾರಂಟಿಗಳು. ಅದನ್ನು ನಾವು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುತ್ತಿದ್ದೇವೆ. ಉದ್ಯೋಗ ಖಾತ್ರಿ ಯೋಜನೆಯೂ ಜನರ ಹಕ್ಕು. ಅದಕ್ಕೆ ಬರಬೇಕಾದ ಅನುದಾನವನ್ನು ಕೇಂದ್ರ ಸರಕಾರ ಯಾಕೆ ಬಿಡುಗಡೆ ಮಾಡುತ್ತಿಲ್ಲ, ಪಿಎಂ ಕಿಸಾನ್, ಫಸಲ್ ಭಿಮಾ ಯೋಜನೆಯ ಅನುದಾನ ಬಂದಿದೆಯೇ ಎಂದು ಪ್ರಶ್ನಿಸಿದರು.
ಇಂದಿರಾ ಕ್ಯಾಂಟೀನ್ ನಂತಿರುವ ಸರಕಾರ: ರಾಜ್ಯದಲ್ಲಿ 600 ಇಂದಿರಾ ಕ್ಯಾಂಟೀನ್‍ಗಳಿವೆ. ಹೊರಗಿನಿಂದ ಕ್ಯಾಂಟೀನ್ ಇರುವುದು ಕಾಣುತ್ತದೆ. ಆದರೆ, ಒಳಗಡೆ ಏನೇನೂ ಇಲ್ಲ. ಅದೇ ರೀತಿ ರಾಜ್ಯದಲ್ಲಿ ಸರಕಾರವಿದೆ, ಆದರೆ ಅಭಿವೃದ್ಧಿಗೆ ಅನುದಾನ ಇಲ್ಲ. ಗ್ರಾಮೀಣ ಪಥ ರಸ್ತೆಗಳ ಕಾಮಗಾರಿಗೆ ಏಕೆ ಟೆಂಡರ್ ಆಗಿಲ್ಲ? ಯಾವ ಕ್ಷೇತ್ರಕ್ಕೆ ಎಷ್ಟು ಕಿ.ಮೀ. ರಸ್ತೆ ನೀಡಿದ್ದೀರಾ ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು.
ಹಾಲು ಉತ್ಪಾದಕರಿಗೆ ನೀಡಬೇಕಾದ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಆಕ್ಸ್ ಫರ್ಡ್ ವಿವಿಯವರು ಈ ಸರಕಾರದ ಅಭಿವೃದ್ಧಿ ಮಾದರಿಯನ್ನು ಕೊಂಡಾಡಿದ್ದಾರೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದಾರೆ ಎಂದ ಅವರು, ಇದೊಂದು ರೀತಿ ‘ಗೌರವ ಡಾಕ್ಟರೇಟ್ ಇದ್ದಂತೆ ಕೊಡುವವನಿಗೂ ಗೊತ್ತಿಲ್ಲ ಯಾಕೆ ಕೊಡುತ್ತಿದ್ದೇವೆ, ಪಡೆಯುವವನಿಗೂ ಗೊತ್ತಿಲ್ಲ ತನಗೆ ಯಾಕೆ ನೀಡಲಾಗುತ್ತಿದೆ’ ಎಂದು ವ್ಯಂಗ್ಯವಾಡಿದರು.
ಮುಡಾ ಹಗರಣದ ಕುರಿತು ಮುಖ್ಯಮಂತ್ರಿ ಸದನದಲ್ಲಿ ಕೊಟ್ಟ ಉತ್ತರವನ್ನು ಎಲ್ಲ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ ಎಂದು ಸುನೀಲ್ ಕುಮಾರ್ ಹೇಳುತ್ತಿದ್ದಂತೆ, ಕಾಂಗ್ರೆಸ್ ಸದಸ್ಯರು ಅವರ ವಿರುದ್ಧ ಮುಗಿ ಬಿದ್ದರು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮತನಾಡಿ, ಪ್ರಧಾನಿ ಮೋದಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿ ಸುಳ್ಳು ಜಾಹೀರಾತುಗಳನ್ನು ನೀಡಿದರು. ನಾವು ಸತ್ಯವನ್ನು ಜನರಿಗೆ ತಿಳಿಸಲು ಜಾಹೀರಾತು ನೀಡಿದರೆ ತಪ್ಪೇ? ಆ ಜಾಹೀರಾತು ಮುಖ್ಯಮಂತ್ರಿ ಕಚೇರಿ ಅಥವಾ ಸರಕಾರದ ಯಾವುದೇ ಇಲಾಖೆಯಿಂದ ಕೊಟ್ಟಿಲ್ಲ. ಮುಖ್ಯಮಂತ್ರಿಯ ಅಭಿಮಾನಿಗಳು ಕೊಟ್ಟಿದ್ದಾರೆ ಎಂದರು.
ವಿಪಕ್ಷ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿ, ಸದನದಲ್ಲಿ ಮುಖ್ಯಮಂತ್ರಿ ನೀಡಿದ ಉತ್ತರವನ್ನು ಜಾಹೀರಾತು ರೂಪದಲ್ಲಿ ಪ್ರಕಟಿಸಿರುವುದು ಕಾನೂನು ಬಾಹಿರ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಯಾವ ಕಾನೂನು ಅಡಿಯಲ್ಲಿ ಇದು ಕಾನೂನು ಬಾಹಿರ ಎಂಬುದನ್ನು ವಿಪಕ್ಷ ನಾಯಕ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಕರಿಮಣಿ ಮಾಲಕ ಯಾರು?: ರಾಜ್ಯ ಬಜೆಟ್ ನಂತರ ಈ ರಾಜ್ಯದ ಕರಿಮಣಿ ಮಾಲಕ ಯಾರು? ಎಂಬ ಅಸ್ಥಿರತೆ ಉಂಟಾಗಿದೆ. ಅತೀ ಹೆಚ್ಚು ಬಜೆಟ್ ಮಂಡನೆ, ಅತೀ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ದಾಖಲೆ ಮುಖ್ಯ ಅಲ್ಲ. ಅಧಿಕಾರದಲ್ಲಿ ಇದ್ದಷ್ಟು ದಿನ ಜನಪರವಾಗಿ ಆಡಳಿತ ಹೇಗೆ ನಡೆಸಿದರು ಎಂಬುದು ಮುಖ್ಯ ಎಂದು ಸುನೀಲ್ ಕುಮಾರ್ ಹೇಳಿದರು.
ಹಿಂದುಳಿದ ವರ್ಗಗಳ ಬಗ್ಗೆ ಮುಖ್ಯಮಂತ್ರಿ ಬದ್ಧತೆಯಿದ್ದರೆ 165 ಕೋಟಿ ರೂ.ಗಳನ್ನು ಖರ್ಚು ಮಾಡಿ ಸಿದ್ಧಪಡಿಸಿರುವ ಕಾಂತರಾಜ ಆಯೋಗದ ವರದಿ(ಜಾತಿ ಜನಗಣತಿ)ಯನ್ನು ಈ ಅಧಿವೇಶನದಲ್ಲೆ ಮಂಡಿಸಲಿ. ಮುಡಾ ಪ್ರಕರಣದ ಲೋಕಾಯುಕ್ತ ವರದಿ ಮೂರು ತಿಂಗಳಲ್ಲಿ ಸರಕಾರದ ಕೈ ಸೇರುತ್ತೆ. ಆದರೆ, ಕಾಂತರಾಜ ಆಯೋಗದ ವರದಿಗೆ ಮಾತ್ರ ಬಿಡುಗಡೆ ಭಾಗ್ಯ ಇಲ್ಲ ಎಂದು ಅವರು ಟೀಕಿಸಿದರು.