ಬೆಳ್ತಂಗಡಿ ಕೃಷಿ ತರಬೇತಿ ಕೇಂದ್ರದಲ್ಲಿ ಆದ್ಯತೆಯ ಮೇರೆಗೆ ಹುದ್ದೆ ಭರ್ತಿ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಸ್ಥಾಪಿಸಲಾದ ಕೃಷಿ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು, ಆದ್ಯತೆಯ ಮೇರೆಗೆ ಹುದ್ದೆಗಳನ್ನು ತುಂಬಲಾಗುತ್ತದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಭೋಸರಾಜು ತಿಳಿಸಿದ್ದಾರೆ.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‍ನ ಸದಸ್ಯ ಕೆ.ಹರೀಶ್ ಕುಮಾರ್ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ರೈತರು ಹಾಗೂ ಬೆಳೆಗಾರರ ತರಬೇತಿ ಸಲುವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಸ್ಥಾಪಿಸಲಾದ ಏಕೈಕ ಕೃಷಿ ತರಬೇತಿ ಕೇಂದ್ರವು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಕೇಂದ್ರಕ್ಕೆ 14 ಹುದ್ದೆಗಳು ಮಂಜೂರಾಗಿದ್ದು, 11 ಹುದ್ದೆಗಳು ಖಾಲಿ ಇವೆ ಎಂದರು.
ಪ್ರಸ್ತುತ ಈ ತರಬೇತಿ ಕೇಂದ್ರದಲ್ಲಿ ಒಬ್ಬ ಸಹಾಯಕ ಕೃಷಿ ನಿರ್ದೇಶಕರು, ಒಬ್ಬ ಅಧೀಕ್ಷಕರು ಹಾಗೂ ಒಬ್ಬ ಪುಥಮ ದರ್ಜೆ ಸಹಾಯಕರ ಹುದ್ದೆಗಳು ಮಾತ್ರ ಭರ್ತಿಯಾಗಿರುತ್ತವೆ. ಆದಾಗ್ಯೂ ಅಧಿಕಾರಿಗಳನ್ನು ಹೆಚ್ಚಿನ ಪ್ರಭಾರದಲ್ಲಿರಿಸಿ ತರಬೇತಿ ಕಾರ್ಯಗಳಿಗೆ ಅಡಚಣೆಯಾಗದಂತೆ ಕ್ರಮ ವಹಿಸಲಾಗಿದೆ. ಮುಂದುವರೆದು, 100 ಕೃಷಿ ಅಧಿಕಾರಿ ಮತ್ತು 650 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆಯ ಸಹಮತಿ ದೊರೆತಿದ್ದು, ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ತುಂಬಲು ಕ್ರಮ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತರು/ರೈತ ಮಹಿಳೆಯರಿಗೆ ತರಬೇತಿ ನೀಡಲು ಅವಶ್ಯಕವಿರುವ ಬೋಧನಾ ಕೊಠಡಿ, ವಸತಿ ನಿಲಯ, ಭೋಜನಾಲಯ ಇತ್ಯಾದಿ ಎಲ್ಲ ಮೂಲ ಸೌಕರ್ಯಗಳು ಇರುತ್ತವೆ. 2023-24ನೆ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಒಟ್ಟು ರೂ.11.67 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ರೂ.7.21 ಲಕ್ಷಗಳ ಅನುದಾನ ಬಳಕೆ ಮಾಡಿಕೊಂಡು 1077 ರೈತರಿಗೆ ನೀರಾವರಿ ಮೂಲಗಳು ಮತ್ತು ನೀರಿನ ಸಂರಕ್ಷಣೆ, ರಸಾವರಿ, ಇಂಧನ ಕ್ಷಮತೆಯ ಪಂಪ್ ಸೆಟ್‍ಗಳ ಆಯ್ಕೆ ಮತ್ತು ಬಳಕೆ, ಸಾವಯವ ಕೃಷಿ, ತೋಟಗಾರಿಕೆ. ಮೀನುಗಾರಿಕೆ, ಜೇನುಕೃಷಿ, ಪಿ.ಎಂ.ಕಿಸಾನ್ ಇತ್ಯಾದಿ ವಿಷಯಗಳ ಕುರಿತು ಒಂದು ದಿನದ 6 ಸಾಂಸ್ಥಿಕ ತರಬೇತಿ, 11 ಹೊರಾಂಗಣ ತರಬೇತಿ, 2 ಆನ್‍ಲೈನ್ ತರಬೇತಿಗಳನ್ನು ಏರ್ಪಡಿಸಲಾಗಿದೆ ಎಂದರು.
39 ರೈತರಿಗೆ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ, ಪಶುವೈದ್ಯಕೀಯ ಕಾಲೇಜು, ಚಿಕ್ಕಮಗಳೂರು ಜಿಲ್ಲೆಯ ಪ್ರಗತಿಪರ ರೈತರ ತಾಕುಗಳಿಗೆ ಮೂರು ದಿನಗಳ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಗಿದೆ. ಉಳಿದ ಅನುದಾನದಲ್ಲಿಯೂ ವರ್ಷಾಂತ್ಯದ ಒಳಗೆ ತರಬೇತಿಯನ್ನು ಹಮ್ಮಿಕೊಳ್ಳಲು ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಲಭ್ಯತೆಗನುಗುಣವಾಗಿ ಹೆಚ್ಚುವರಿ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಜಿಲ್ಲ ಕೃಷಿ ತರಬೇತಿ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.