‘ಮಂಗನ ಕಾಯಿಲೆ’ಗೆ ಶೀಘ್ರದಲ್ಲೆ ಲಸಿಕೆ : ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಮಲೆನಾಡು ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‍ಡಿ) ‘ಮಂಗನ ಕಾಯಿಲೆ’ಗೆ ಲಸಿಕೆ ತಯಾರಿಸಲು ಹೈದರಾಬಾದ್‍ನ ಐಸಿಎಂಆರ್‌ನಲ್ಲಿ ಸಂಶೋಧನೆ ನಡೆಸಲಾಗುತ್ತಿದ್ದು, ಮುಂದಿನ ವರ್ಷದ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಭರವಸೆ ನೀಡಿದ್ದಾರೆ.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘ಡೆಂಗ್’ ಮಳೆಗಾಲದಲ್ಲಿ ಕಾಡುತ್ತಿದೆ. ಮಂಗನ ಕಾಯಿಲೆ ಬೇಸಿಗೆ ಕಾಲದಲ್ಲಿ ಹೆಚ್ಚಾಗುತ್ತದೆ. ಸದ್ಯಕ್ಕೆ ಮಂಗನಕಾಯಿಲೆಗೆ ನಮ್ಮಲ್ಲಿ ಯಾವುದೇ ಔಷಧಿ ಲಭ್ಯವಿಲ್ಲ. ಹೀಗಾಗಿ ಆ ಕಾಯಿಲೆ ತಡೆಗಟ್ಟಲು ಸೂಕ್ತ ಮುನ್ನಚ್ಚರಿಕೆ ಅಗತ್ಯ. ಆ ಹಿನ್ನೆಲೆಯಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದರು.
ಮಂಗನ ಕಾಯಿಲೆಯಿಂದ ಒಬ್ಬರು ಸಾವನ್ನಪ್ಪಿದ್ದು, ಅವರಿಗೆ ಮೂತ್ರಪಿಂಡ (ಕಿಡ್ನಿ) ಸೇರಿದಂತೆ ಬೇರೆ ಆರೋಗ್ಯ ಸಮಸ್ಯೆಗಳಿದ್ದವು. ಮಂಗನ ಕಾಯಿಲೆಗೆ ನಿರ್ದಿಷ್ಟ ಔಷಧಿ ಇಲ್ಲ. ಮುಂಜಾಗ್ರತೆ ಉತ್ತಮ ಪರಿಹಾರ. ಈ ಹಿಂದೆ ಪುಣೆಯ ವೈರಲಾಜಿ ಸಂಸ್ಥೆ 1989ರಲ್ಲಿ ಲಸಿಕೆ ಕಂಡು ಹಿಡಿದಿತ್ತು. ಈಗ ಔಷಧಿಯ ಪ್ರಭಾವ ಕಡಿಮೆಯಾಗಿದೆ.
ಹೊಸದಾಗಿ ಲಸಿಕೆ ಕಂಡು ಹಿಡಿಯಲು ಹೈದರಾಬಾದ್‍ನ ಐಸಿಎಂಆರ್ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಮಂಗನ ಕಾಯಿಲೆ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಲಸಿಕೆ ಅಭಿವೃದ್ಧಿಗೆ ರಾಜ್ಯ ಸರಕಾರ ಹಣಕಾಸಿನ ಸೌಲಭ್ಯ ಒದಗಿಸಲು ವಿಳಂಬವಾಯಿತು. ಅಲ್ಲದೆ, ಮೊಬೈಲ್ ಚಿಕಿತ್ಸಾ ಘಟಕ ಸ್ಥಾಪಿಸಲು ಸರಕಾರ ಕ್ರಮ ವಹಿಸಲಿದೆ ಎಂದು ಅವರು ಭರವಸೆ ನೀಡಿದರು.
ಶಿವಮೊಗ್ಗದಲ್ಲಿ 22, ಚಿಕ್ಕಮಗಳೂರಿನಲ್ಲಿ 29 ಹಾಗೂ ಉತ್ತರ ಕನ್ನಡದಲ್ಲಿ ಒಬ್ಬರು ಸೇರಿದಂತೆ ಒಟ್ಟು 52 ಮಂಗನ ಕಾಯಿಲೆ(ಕೆಎಫ್‍ಡಿ) ಪ್ರಕರಣಗಳು 2025ರ ಜನವರಿ 1ರಿಂದ 2025ರ ಫೆಬ್ರವರಿ 26ರ ವರೆಗೆ ವರದಿಯಾಗಿವೆ. ಅದೇ ರೀತಿಯಲ್ಲಿ ರಾಜ್ಯದಲ್ಲಿ 674 ಡೆಂಗ್ ಪ್ರಕರಣಗಳು ಖಚಿತವಾಗಿವೆ ಎಂದು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.