ವಾಲ್ಮೀಕಿ ನಿಗಮದ ಹಗರಣ ಪ್ರಕರಣ | ಪರಪ್ಪನ ಅಗ್ರಹಾರ ಜೈಲಿನಿಂದ ಮಾಜಿ ಸಚಿವ ಬಿ. ನಾಗೇಂದ್ರ ಬಿಡುಗಡೆ
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ನಾಗೇಂದ್ರ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಬೆಳಿಗ್ಗೆ ಬಿಡುಗಡೆಗೊಂಡಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿಯಲ್ಲಿ ಮೂರು ತಿಂಗಳ ಹಿಂದೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಬಂಧಿಸಲಾಗಿತ್ತು.
ಸೋಮವಾರ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು.
ಸಿಎಂ, ಡಿಸಿಎಂ ಹೆಸರು ಹೇಳುವಂತೆ ಕಿರುಕುಳ :
ಜೈಲಿನಿಂದ ಬಿಡುಗಡೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ನಾಗೇಂದ್ರ, ‘ವಾಲ್ಮೀಕಿ ನಿಗಮ ಹಗರಣದಲ್ಲಿ ನನ್ನಿಂದ ಯಾವುದೇ ತಪ್ಪು ನಡೆದಿಲ್ಲ. ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಗಳು ಯಾರದ್ದೋ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ, ಪ್ರಕರಣದ ವಿಚಾರಣೆ ನಡೆಸುವಾಗ ಸಿದ್ದರಾಮಯ್ಯ ಇಲ್ಲವೇ, ಡಿ.ಕೆ.ಶಿವಕುಮಾರ್ ಹೆಸರು ಹೇಳುವಂತೆ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹೇರಿದ್ದರು ಎಂದು ದೂರಿದರು.
ವಾಲ್ಮೀಕಿ ನಿಗಮದ ಹಗರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳು ನನ್ನ ಪಾತ್ರವಿಲ್ಲ ಎಂದು ಹೇಳಿದ್ದರೂ, ಕೇಂದ್ರ ಸರಕಾರ ಹಾಗೂ ಬಿಜೆಪಿಯಿಂದ ನಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಷಡ್ಯಂತ್ರ ನಡೆದಿದೆ. ಇದು ಬ್ಯಾಂಕ್ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಆಗಿರುವ ಹಗರಣವಾಗಿದ್ದು, ವಿನಾಕಾರಣ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಸಿಲುಕಿಸುವ ಕೆಲಸ ಮಾಡಲಾಗಿದೆ. ವಿರೋಧಿಗಳ ಯಾವುದೇ ಬೆದರಿಕೆಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ ಎಂದು ಬಿ.ನಾಗೇಂದ್ರ ಎಚ್ಚರಿಸಿದರು.
ಹಣ ವರ್ಗಾವಣೆ ಮಾಡಲು ನನ್ನಿಂದ ಯಾವುದೇ ಶಿಫಾರಸು ಆಗಿಲ್ಲ. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ, ಈಗ ಹೊರ ಬಂದಿದ್ದೇನೆ. ವಿಶೇಷ ತನಿಖಾ ತಂಡದ ಅಧಿಕಾರಿಗಳು ಕೂಡ ಯಾವ ಈ.ಡಿ., ಸಿಬಿಐಗೆ ಕಡಿಮೆ ಇಲ್ಲ. ಈ.ಡಿ. ಅಧಿಕಾರಿಗಳು ದುರುದ್ದೇಶ ಪೂರ್ವಕವಾಗಿ ಕೆಲಸ ಮಾಡಿದ್ದಾರೆ ಎಂದು ಬಿ.ನಾಗೇಂದ್ರ ಆಕ್ರೋಶ ಹೊರಹಾಕಿದರು.