ಕಾಗೋಡು ತಿಮ್ಮಪ್ಪ ಅವರಿಂದ ಅರಸು ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ: ಸಿಎಂ ಸಿದ್ದರಾಮಯ್ಯ
ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು ಆ 20: ʼಸಮಾಜವಾದಿ ಚಳವಳಿ ಮತ್ತು ಗೇಣಿ ಹೋರಾಟಗಾರ ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜು ಅರಸು ಪ್ರಶಸ್ತಿ ಲಭಿಸಿರುವುದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ದೇವರಾಜು ಅರಸು ಅವರ 108 ನೇ ಜನ್ಮ ದಿನಾಚರಣೆ ಹಾಗೂ ಡಿ.ದೇವರಾಜ ಅರಸು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಅರಸು ಪ್ರಶಸ್ತಿ ವಿತರಿಸಿ ಮಾತನಾಡಿದರು.
ʼʼನಾನು ಮುಖ್ಯಮಂತ್ರಿ ಆಗಿರುವ ಅವಧಿಯಲ್ಲೇ ಕಾಗೋಡು ತಿಮ್ಮಪ್ಪ ಅವರಿಗೆ ಅರಸು ಪ್ರಶಸ್ತಿ ಲಭಿಸಿರುವುದು ನನಗೆ ಅತ್ಯಂತ ಖುಷಿಯಾಗಿದೆ. ಬಹಳಷ್ಟು ಯುವ ನಾಯಕರನ್ನು ಕಾಗೋಡು ತಿಮ್ಮಪ್ಪ ಬೆಳೆಸಿದ್ದಾರೆʼʼ ಎಂದು ಮೆಚ್ಚುಗೆ ಸೂಚಿಸಿದರು.
ʼದೇವರಾಜ ಅರಸು ಅವರ ಕಾರ್ಯಕ್ರಮಗಳ ಅನುಕೂಲವ ಪಡೆದ ಫಲಾನುಭವಿಗಳು ಮತ್ತು ಅವರ ಮಕ್ಕಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿ ಇರಬೇಕುʼ ಎಂದು ಅವರು ಯುವ ಸಮೂಹಕ್ಕೆ ಕರೆ ನೀಡಿದರು.
ʼಕನ್ನಡ ನೆಲ ಸಾಮಾಜಿಕ ನ್ಯಾಯವನ್ನು ಕ್ರಾಂತಿಕಾರಿಯಾಗಿ ಜಾರಿ ಮಾಡಿದ ಇತಿಹಾಸ ಹೊಂದಿದೆ. ಬಸವಣ್ಣನವರಿಂದ ಹಿಡಿದು ಕೃಷ್ಣರಾಜ ಒಡೆಯರು ಮತ್ತು ದೇವರಾಜ ಅರಸು ಅವರ ವರೆಗೂ ಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗೆ ಇದೆʼ ಎಂದರು.
ʼದೇವರಾಜ ಅರಸರು ಜಾರಿಗೆ ತಂದಿದ್ದು, ಕಾಗೋಡು ತಿಮ್ಮಪ್ಪನವರು ಹೋರಾಟ ಮಾಡಿದ್ದು ಉಳುವವನೇ ಭೂಮಿ ಒಡೆಯ ಆಗಬೇಕು ಎನ್ನುವುದಾಗಿತ್ತು. ಆದರೆ ಈಗ ಬಿಜೆಪಿ ಬಂದ ಮೇಲೆ "ಉಳ್ಳವನೇ ಭೂಮಿ ಒಡೆಯ" ಎನ್ನುವಂತಾಗಿದೆʼ ಎಂದು ಟೀಕಿಸಿದರು.