ರಾಜ್ಯದಲ್ಲಿನ ಗಲಭೆ ಪ್ರಕರಣಗಳ ತನಿಖೆಯನ್ನು ಎನ್‍ಐಎಗೆ ವಹಿಸಿ : ವಿಜಯೇಂದ್ರ ಆಗ್ರಹ
ಬೆಂಗಳೂರು : ದೇಶದ್ರೋಹಿಗಳ ವಿರುದ್ಧ ರಾಜ್ಯ ಕಾಂಗ್ರೆಸ್ ಸರಕಾರದ ಮೃದು ಧೋರಣೆಯಿಂದ ಶಾಂತಿ-ಸುವ್ಯವಸ್ಥೆ ಕದಡುವ ಕೆಲಸ ಆಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ಸೇರಿದಂತೆ ರಾಜ್ಯದಲ್ಲಿನ ಗಲಭೆ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ(ಎನ್‍ಐಎ)ಕ್ಕೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಶುಕ್ರವಾರ ಬಿಜೆಪಿ ಮುಖಂಡರ ನಾಗಮಂಗಲ ಸತ್ಯಾಶೋಧನಾ ತಂಡದ ವರದಿ ಸ್ವೀಕರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಗಮಂಗಲ, ದಾವಣಗೆರೆ ಮತ್ತಿತರ ಕಡೆ ನಡೆದ ಗಲಭೆಗಳ ಕುರಿತು ರಾಜ್ಯ ಸರಕಾರದ ನೇತೃತ್ವದಲ್ಲಿ ಸಮರ್ಪಕ ತನಿಖೆ ನಡೆಯಲು ಸಾಧ್ಯವಿಲ್ಲ. ಈ ಘಟನೆಗಳ ಬಗ್ಗೆ ಎನ್‍ಐಎಯಿಂದ ತನಿಖೆ ಆಗಬೇಕೆಂದು ಅವರು ಆಗ್ರಹಿಸಿದರು.
ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ಬದಿಗಿಡಿ. ಎಲ್ಲ ಸಮಾಜದ ಜನರು ನೆಮ್ಮದಿಯಿಂದ ಬದುಕುವಂತಾಗಲು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಬದಿಗಿಟ್ಟು, ಎಲ್ಲ ಘಟನೆಗಳ ತನಿಖೆಯನ್ನು ಎನ್‍ಐಎಗೆ ಕೊಡಿ. ಹಿಂದೂಗಳ ಮೇಲೆ ಬಲಾತ್ಕಾರ ಆಗುತ್ತಿದೆ. ಪೊಲೀಸರ ಕಣ್ಮುಂದೆ ಇದೆಲ್ಲ ನಡೆದರೂ ಅವರು ಕಣ್ಮುಚ್ಚಿ ಕೂತಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬ ಭ್ರಮೆಯಲ್ಲಿ ರಾಜ್ಯದ ಸಿಎಂ ಇದ್ದಾರೆ. ಇದೇ ಕಾರಣಕ್ಕೆ ಅಲ್ಪಸಂಖ್ಯಾತರು ರಾಜ್ಯದಲ್ಲಿ ಮೆರೆಯುತ್ತಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ದಾವಣಗೆರೆ, ನಾಗಮಂಗಲ ಸೇರಿ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಘಟನಾವಳಿಗಳನ್ನು ಗಮನಿಸಿದರೆ ಈ ರಾಜ್ಯದಲ್ಲಿ ಸರಕಾರ, ಪೊಲೀಸ್ ವ್ಯವಸ್ಥೆ ಇದೆ ಎಂಬುದೇ ಮರೆತುಹೋಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರಕಾರ ಇದೆ, ಡಾ.ಪರಮೇಶ್ವರ್ ಗೃಹ ಸಚಿವರಾಗಿದ್ದಾರೆ. ಏನೇ ಆದರೂ ಅದನ್ನು ಸಣ್ಣ ಘಟನೆ ಎಂದು ಸರಕಾರ ಕೈಕಟ್ಟಿಕೊಂಡು ಕೂರುತ್ತದೆಂಬ ಧೈರ್ಯ-ವಿಶ್ವಾಸ ದೇಶದ್ರೋಹಿಗಳಲ್ಲಿದೆ ಎಂದು ಅವರು ವಿಶ್ಲೇಷಿಸಿದರು.