ಸರಕಾರದ ಅಸಡ್ಡೆತನ ತಾಯಂದಿರ ಪ್ರಾಣಗಳಿಗೆ ಸಂಚಕಾರ ತಂದೊಡ್ಡಿದೆ : ವಿಜಯೇಂದ್ರ
ಬಿ.ವೈ.ವಿಜಯೇಂದ್ರ
ಬೆಂಗಳೂರು : ರಾಜ್ಯದೆಲ್ಲೆಡೆ ಬಾಣಂತಿಯರ ಸರಣಿ ಸಾವುಗಳ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದರೂ ಮೊನ್ನೆಯಷ್ಟೇ ನಡೆದ ಬೆಳಗಾವಿಯ ಚಳಿಗಾಲದ ಅಧಿವೇಶನದ ನಂತರವೂ ಸಾವುಗಳು ನಿಲ್ಲುತ್ತಿಲ್ಲವೆಂದರೆ ಕಾಂಗ್ರೆಸ್ ಸರಕಾರದ ಅಸಡ್ಡೆತನ ನಾಡಿನ ಬಡ ಕುಟುಂಬಗಳ ತಾಯಂದಿರ ಪ್ರಾಣಗಳಿಗೆ ಸಂಚಕಾರ ತಂದೊಡ್ಡಿದೆ ಎಂದರೆ ತಪ್ಪಾಗಲಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಸೋಮವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಬೆಳಗಾವಿ ಜಿಲ್ಲೆಯಲ್ಲಿ ಕಳೆದ 6 ತಿಂಗಳಲ್ಲೇ 29 ಬಾಣಂತಿಯರು ಹಾಗೂ 1 ವರ್ಷದಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿದ್ದರು. ಇದೀಗ ಕಳೆದ 5 ದಿನಗಳ ಅಂತರದಲ್ಲಿ ಇಬ್ಬರು ತಾಯಂದಿರು ಸಾವಿಗೀಡಾಗಿರುವ ಘಟನೆ ನಿಜಕ್ಕೂ ರಾಜ್ಯವೇ ತಲೆ ತಗ್ಗಿಸುವಂತಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರಕಾರ ಈ ಕೂಡಲೇ ಪ್ರಕರಣದ ಗಂಭೀರತೆಯನ್ನು ಅರಿತು ಉನ್ನತ ತನಿಖೆಗೆ ವಹಿಸಿ, ಬಾಣಂತಿಯರ ಸಾವಿಗೆ ಕಾರಣ ತಿಳಿದು ಬಡ ಕುಟುಂಬಗಳ ತಾಯಂದಿರ ಪ್ರಾಣ ಉಳಿಸುವ ನಿಟ್ಟಿನಲ್ಲಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿದ್ದಾರೆ.