ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತ : ವಿಜಯೇಂದ್ರ
ವಿಜಯೇಂದ್ರ
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಕಾಲ ಸನ್ನಿಹಿತವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳಕ್ಕೆ ತೆಪೆಹಾಕಲು ಸಾಧ್ಯವಿಲ್ಲ. ಅವರು ಏನೇ ಪ್ರಯತ್ನ ಮಾಡಿದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನುಡಿದಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಡಾ ಹಗರಣದಡಿ ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ಸಿಎಂ ಕುಟುಂಬ ಅಕ್ರಮವಾಗಿ ಪಡೆದುಕೊಂಡಿತ್ತು. ನಿವೇಶನಗಳನ್ನು ಹಿಂತಿರುಗಿಸಿದರೂ ತಪ್ಪು ತಪ್ಪೇ ಎಂದು ತಿಳಿಸಿದರು.
ಯಾರೇ ಮಾಡಿದರೂ ಅಪರಾಧ ಅಪರಾಧವೇ, ನಿವೇಶನ ಹಿಂತಿರುಗಿಸಿದ ಮಾತ್ರಕ್ಕೆ ಕಳಂಕದಿಂದ ಹೊರಕ್ಕೆ ಬರಲು ಸಾಧ್ಯವಿಲ್ಲ. ಇಂದು ಸ್ನೇಹಮಯಿ ಕೃಷ್ಣರ ಮೇಲೆ ಬೆದರಿಕೆ ಹಾಕಿ ಕೇಸುಗಳನ್ನು ಹಾಕುತ್ತಿದ್ದಾರೆ. ಇವೆಲ್ಲ ಪಿತೂರಿ ನಡೆದುಕೊಂಡು ಬಂದಿದೆ ಎಂದು ಅವರು ಟೀಕಿಸಿದರು.
ಸ್ನೇಹಮಯಿ ಕೃಷ್ಣ ನ್ಯಾಯಪರ ಹೋರಾಟ ಕೈಬಿಟ್ಟಿಲ್ಲ, ಅವರನ್ನು ಅಭಿನಂದಿಸುವೆ. ಕೃಷ್ಣರ ಕೋರಿಕೆಯಂತೆ ಹೈಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವುದೆಂಬ ವಿಶ್ವಾಸ ಇದೆ. 14 ನಿವೇಶನವಷ್ಟೇ ಅಲ್ಲ, ಇದರಲ್ಲಿ ಸುಮಾರು 5 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಗರಣ ನಡೆದಿದೆ. ಕಾಂಗ್ರೆಸ್ ಸರಕಾರ ಬಂದಾಗಿನಿಂದ ಸಾವಿರಾರು ನಿವೇಶನಗಳನ್ನು ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ ಮಾರಾಟ ಮಾಡಲಾಗಿದೆ ಎಂದರು.