ರೈತರ ಹೊಲಗಳಿಗೆ ಸಮರ್ಪಕವಾಗಿ ಆರೇಳು ತಾಸು ವಿದ್ಯುತ್ ಕೊಡಲು ಸರಕಾರಕ್ಕೆ ಆಗುತ್ತಿಲ್ಲ: ವಿಜಯೇಂದ್ರ ಆಕ್ರೋಶ

ಬಿ.ವೈ.ವಿಜಯೇಂದ್ರ
ಬೆಂಗಳೂರು : ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಭ್ರಮೆಯಿಂದ ಹೊರಬಂದು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ರೈತರ ಸಂಕಷ್ಟವನ್ನು ನಿವಾರಿಸಬೇಕು. ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಮರ್ಪಕವಾಗಿ ಆರೇಳು ತಾಸು ವಿದ್ಯುತ್ ಕೊಡಲು ಸರಕಾರದಿಂದ ಆಗುತ್ತಿಲ್ಲ. ರೈತರಿಗೆ ಯಾವಾಗ ಕರೆಂಟ್ ಬರುತ್ತದೆ, ಯಾವಾಗ ಇರುವುದಿಲ್ಲ ಎಂದು ತಿಳಿಯದಂತಾಗಿದೆ. ಇಲಾಖೆಯವರು ರಾತ್ರಿ 10 ಗಂಟೆಯಿಂದ ವಿದ್ಯುತ್ ಕೊಡುವುದಾಗಿ ಹೇಳುತ್ತಾರೆ. ರೈತರು ಹೊಲದಲ್ಲಿ ಕಾದರೂ 12ಗಂಟೆವರೆಗೂ ವಿದ್ಯುತ್ ಬರುವುದಿಲ್ಲ ಎಂದು ಆಕ್ಷೇಪಿಸಿದರು.
ಸರಕಾರವು ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ, ವಿದ್ಯುತ್ ಅಭಾವ ಇದ್ದರೆ ಹೊರರಾಜ್ಯಗಳಿಂದ ಖರೀದಿ ಮಾಡಬೇಕೇ ಎಂಬುದರ ಕಡೆ ತಯಾರಿಯನ್ನು ಸರಕಾರ ಮಾಡಬೇಕಿದೆ. ವಿದ್ಯುತ್ ಅವ್ಯವಸ್ಥೆಯಿಂದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಬಾರದು. ರೈತರ ಸಂಕಷ್ಟ ಪರಿಹರಿಸಿ ಎಂದು ವಿಜಯೇಂದ್ರ ಆಗ್ರಹಿಸಿದರು.
ಗುಂಡಿ ಮುಚ್ಚಲಾಗದ ಸರಕಾರ: ಕಾಂಗ್ರೆಸ್ ಸರಕಾರದ ಯೋಗ್ಯತೆಗೆ ಬೆಂಗಳೂರು ಮಹಾನಗರದಲ್ಲಿ ಗುಂಡಿ ಮುಚ್ಚಲು ಸಾಧ್ಯ ಆಗುತ್ತಿಲ್ಲ, ಬೆಂಗಳೂರಿನಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ಶಾಸಕರಿಗೆ ಹಣ ಕೊಡುತ್ತಿಲ್ಲ. ಇವರು ಅಭಿವೃದ್ಧಿ ಬಗ್ಗೆ ಮಾತನಾಡುವುದು ದುರಂತ ಎಂದು ಟೀಕಿಸಿದರು.
ಅವೈಜ್ಞಾನಿಕ ತೀರ್ಮಾನ: ಯಾವುದೇ ಕಾರಣವಿಲ್ಲದೆ ರಾಜ್ಯದ 9 ವಿವಿಗಳನ್ನು ಮುಚ್ಚುವ ಸರಕಾರದ ತೀರ್ಮಾನ ಅವೈಜ್ಞಾನಿಕ. ಇದು ಅವಿವೇಕತನದ ನಿರ್ಧಾರ. ಇದರ ವಿರುದ್ಧ ರಾಜಕೀಯೇತರ ನೆಲೆಯಿಂದ ಹೋರಾಟ ಮಾಡಬೇಕಿದೆ. ಎಬಿವಿಪಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಬಿಜೆಪಿ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.