‘ಜಾತಿಗಣತಿ ಜಾರಿಯಾದರೆ’ ಲಿಂಗಾಯತ, ಬ್ರಾಹ್ಮಣ ಸಮುದಾಯಗಳನ್ನು ಒಟ್ಟುಗೂಡಿಸಿ ಕರ್ನಾಟಕ ಬಂದ್ : ಒಕ್ಕಲಿಗರ ಸಂಘ ಎಚ್ಚರಿಕೆ

ಬೆಂಗಳೂರು : ರಾಜ್ಯ ಸರಕಾರವು ಎಚ್.ಕಾಂತರಾಜು ನೇತೃತ್ವದ ‘ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ’(ಜಾತಿಗಣತಿ) ವರದಿಯನ್ನು ಜಾರಿಮಾಡಿದರೆ, ಇದರಿಂದ ಅನ್ಯಾಯಕ್ಕೆ ಒಳಗಾಗುವ ಲಿಂಗಾಯತ ಮತ್ತು ಬ್ರಾಹ್ಮಣ ಸಮುದಾಯಗಳನ್ನು ಒಟ್ಟುಗೂಡಿಸಿ ಕರ್ನಾಟಕ ಬಂದ್ ಮಾಡಲಾಗುವುದು ಎಂದು ರಾಜ್ಯ ಒಕ್ಕಲಿಗರ ಸಂಘ ಎಚ್ಚರಿಕೆ ನೀಡಿದೆ.
ಮಂಗಳವಾರ ಇಲ್ಲಿನ ಕೆಂಪೇಗೌಡ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಮಾತನಾಡಿ, ಸರಕಾರವು ಜಾತಿಗಣತಿ ವರದಿಯನ್ನು ಹಿಂಪಡೆಯಬೇಕು. ಒಂದು ವೇಳೆ ವರದಿ ಜಾರಿಗೊಳಿಸಿದರೆ ಸರಕಾರ ಉಳಿಯುವುದಿಲ್ಲ. ಸರಕಾರವನ್ನೇ ಬೀಳುಳಿಸುವ ಶಕ್ತಿ ಸಮುದಾಯಕ್ಕಿದೆ ಎಂದರು.
ಎ.17ರ ನಂತರ ಜಾತಿಗಣತಿ ವರದಿ ವಿರುದ್ಧ ಹೋರಾಟದ ರೂಪುರೇಷಗಳನ್ನು ರೂಪಿಸಲಾಗುವುದು. ಅನ್ಯಾಯಕ್ಕೆ ಒಳಗಾಗಿರುವ ಸಮುದಾಯಗಳನ್ನು ಒಟ್ಟುಗೂಡಿಸಿ ವಿಧಾನಸೌಧಕ್ಕೆ ಮುತ್ತಿಗೆಯನ್ನೂ ಹಾಕಲಾಗುವುದು ಎಂದು ಅವರು ಹೇಳಿದರು.
ಜನಗಣತಿ ವರದಿಯಲ್ಲಿ ನಮ್ಮ ಸಮುದಾಯದ ಜನಸಂಖ್ಯೆಯನ್ನೇ ಕಡಿಮೆ ತೋರಿಸಲಾಗಿದೆ. ಸಮುದಾಯದಲ್ಲಿ 117 ಉಪ ಪಂಗಡಗಳಿದ್ದು, ಉಪ ಪಂಗಡಗಳ ಸಂಖ್ಯೆಯನ್ನೂ ಕಡಿಮೆಗೊಳಿಸಿ ನಮ್ಮಲ್ಲಿಯೇ ವೈರತ್ವ ಮೂಡಿಸಲು ಯತ್ನಿಸಲಾಗಿದೆ ಎಂದು ಅವರು ಆರೋಪಿಸಿದರು.
ಆಧಾರ್ ಸಂಖ್ಯೆ ಪ್ರಕಾರ ರಾಜ್ಯದಲ್ಲಿ ಅಂದಾಜು 7 ಕೋಟಿ ಜನಸಂಖ್ಯೆ ಇದೆ. ಸಮೀಕ್ಷೆಯು 6 ಕೋಟಿ ಜನರನ್ನು ಒಳಗೊಂಡಿದ್ದು, 1 ಕೋಟಿ ಜನರು ಸಮೀಕ್ಷೆಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಸಮೀಕ್ಷೆ ವೇಳೆ ಸಾಕಷ್ಟು ಲೋಪದೋಷಗಳಾಗಿದ್ದು, ವರದಿ ನ್ಯೂನತೆಯಿಂದ ಕೂಡಿದೆ. ಪ್ರತಿಯೊಬ್ಬರ ಆಧಾರ್ ಕಾರ್ಡ್‍ನೊಂದಿಗೆ ಜಿಯೋ ಟ್ಯಾಗ್ ಮೂಲಕ ಮತ್ತೊಮ್ಮೆ ಸಮೀಕ್ಷೆ ನಡೆಸಿದರೆ, ಎಲ್ಲ ವರ್ಗಗಳ ಜನಸಂಖ್ಯೆ ನಿಖರವಾಗಿ ತಿಳಿಯಲಿದೆ ಎಂದು ಅವರು ತಿಳಿಸಿದರು.
10 ವರ್ಷಗಳ ಹಿಂದೆ ಸಮೀಕ್ಷೆ ಮಾಡಿದ ವರದಿಯನ್ನು ಈಗ ಜಾರಿಗೊಳಿಸಲು ಮುಂದಾಗಿದೆ. ಹೀಗಾಗಿ ಅವೈಜ್ಞಾನಿಕವಾದ ಈ ವರದಿಯನ್ನು ಕೈ ಬಿಡಬೇಕು. ಎಷ್ಟೇ ಖರ್ಚಾದರೂ ಸಂಘದಿಂದ ಪ್ರತ್ಯೇಕ ಜಾತಿಗಣತಿ ಸಮೀಕ್ಷೆ ಮಾಡುತ್ತೇವೆ. ಇದಕ್ಕಾಗಿ ಸಾಫ್ಟ್‌ವೇರ್ ಸಿದ್ಧಪಡಿಸಲಾಗುವುದು ಎಂದು ಬಿ.ಕೆಂಚಪ್ಪಗೌಡ ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ ಮಾತನಾಡಿ, ಒಕ್ಕಲಿಗ ಸಮುದಾಯದ ಉಪಯೋಗ ಪಡೆದು ಸರಕಾರದಲ್ಲಿ ಮಂತ್ರಿ ಹಾಗೂ ಶಾಸಕರಾಗಿರುವ ಸಮುದಾಯದ ಜನಪ್ರತಿನಿಧಿಗಳು ಎಚ್.ಕಾಂತರಾಜು ನೇತೃತ್ವದ ವರದಿಯನ್ನು ವಿರೋಧಿಸಬೇಕು ಎಂದರು.
ನಗರದಲ್ಲಿ ಒಕ್ಕಲಿಗ ಸಮುದಾಯದ ದೊಡ್ಡಮಟ್ಟದ ಸಭೆ ಕರೆದು ಹೋರಾಟಕ್ಕೆ ಕರೆ ನೀಡುತ್ತೇವೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಹೋರಾಟಕ್ಕೆ ಕರೆ ನೀಡಲಾಗುವುದು. ಸಭೆ ಯಾವಾಗ ಮಾಡಬೇಕೆಂದು ಸಮುದಾಯದ ಸ್ವಾಮೀಜಿಗಳು ಹೇಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಎಲ್.ಶ್ರೀನಿವಾಸ್, ಸಹಾಯಕ ಕಾರ್ಯದರ್ಶಿ ಹನುಮಂತರಾಯಪ್ಪ, ಖಜಾಂಚಿ ನಲ್ಲಿಗೆರೆ ಬಾಲು, ಸಂಘದ ನಿರ್ದೇಶಕರಾದ ಸಿ.ಎಂ.ಮಾರೇಗೌಡ, ಸಿ.ಜಿ.ಗಂಗಾಧರ್, ಕೆ. ಎಸ್. ಸುರೇಶ್, ಎಚ್.ಸಿ. ಜಯಮುತ್ತು ಸೇರಿದಂತೆ ಮತ್ತಿತರರಿದ್ದರು.
‘ರಾಜ್ಯದ 224 ಕ್ಷೇತ್ರದಲ್ಲಿ ಒಕ್ಕಲಿಗರು ಕೇವಲ 61 ಲಕ್ಷ ಮಾತ್ರ ಇರಲು ಸಾಧ್ಯವೇ ಇಲ್ಲ. ಒಂದೊಂದು ತಾಲೂಕಿನಲ್ಲೂ 60 ಸಾವಿರದಿಂದ 1ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಜನಸಂಖ್ಯೆ ಇದೆ. ಆದರೆ ಜಾತಿಗಣತಿ ವರದಿಯಲ್ಲಿ ನಮ್ಮ ಜನಾಂಗವನ್ನು 6ನೆ ಸ್ಥಾನದಲ್ಲಿ ಇರಿಸಲಾಗಿದೆ’
-ಬಿ.ಕೆಂಚಪ್ಪಗೌಡ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ