ಬಿಜೆಪಿ ಮಾಡಿರುವ ದ್ರೋಹಕ್ಕೆ ಪಾಠ ಕಲಿಸಲು ಕಾಂಗ್ರೆಸ್ ಗೆ ಮತ ನೀಡಿ : ಸಿಎಂ ಸಿದ್ದರಾಮಯ್ಯ
ಮಂಡ್ಯ: ಕರ್ನಾಟಕಕ್ಕೆ ತೆರಿಗೆಯ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಿದರೆ ಅವಮಾನ ಆಯಿತು ಎಂದು ಬಿಜೆಪಿಯವರು ಹೇಳುತ್ತಾರೆ. ಈ ದ್ರೋಹದ ವಿರುದ್ಧ ಅವರಿಗೆ ಪಾಠ ಕಲಿಸಬೇಕು ಎಂದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ಮಳವಳ್ಳಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮತ್ತು ಸರಕಾರದ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿದ ನಂತರ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು .
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನವರು ಏನೇ ಆಮಿಷಗಳನ್ನು ತೋರಿಸಿದರೂ ಕೂಡ ಅದಕ್ಕೆ ಮಣಿಯದೇ ನಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಮಳವಳ್ಳಿಯಲ್ಲಿ ನೀಡಿದ್ದ ಭಾರವಸೆಯಂತೆ 470 ಕೋಟಿ ರೂ.ಗಳ ಅಂದಾಜು ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ನಿಮ್ಮ ಜನತಾದಳ ಜಾತ್ಯಾತೀತ ದಲ್ಲಿ ಜಾತ್ಯಾತೀತ ಎನ್ನುವ ಪದ ತೆಗೆಯಿರಿ
ಕಳೆದ ಚುನಾವಣೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿ ಗಳನ್ನು ಎಂಟು ತಿಂಗಳಲ್ಲಿ ಜಾರಿ ಮಾಡಿ ಭರವಸೆ ಈಡೇರಿಸಿದ್ದೇವೆ ಎಂದರು. ಬಿಜೆಪಿ, ಜೆಡಿಎಸ್ ನಂತೆ ನಾವು ಮಾತಿಗೆ ತಪ್ಪುವವರಲ್ಲ. ಬಿಜೆಪಿ, ಜೆಡಿಎಸ್ ಈಗ ಒಂದಾಗಿದ್ದಾರೆ. ಆದರೆ ಹಿಂದೊಮ್ಮೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನ ನಾಗಿ ಹುಟ್ಟು ತ್ತೇನೆ ಎಂದಿದ್ದರು. ಈಗ ಕೋಮುವಾದಿ ಬಿಜೆಪಿ ಯವರ ಜೊತೆಗೆ ಸೇರಿದ್ದಾರೆ. ಈಗ ನಾನೇ ಮಗನನ್ನು ಬಿಜೆಪಿ ಗೆ ಕಳುಹಿಸಿದೆ ಎನ್ನುತ್ತಾರೆ. ನಿಮ್ಮ ಜನತಾದಳ ಜಾತ್ಯಾತೀತ ದಲ್ಲಿ ಜಾತ್ಯಾತೀತ ಎನ್ನುವ ಪದ ತೆಗೆಯಿರಿ. ಹಾಗೆ ಇಟ್ಟುಕೊಳ್ಳಲು ನಿಮಗೆ ಯಾವುದೇ ನೈತಿಕತೆ ಇಲ್ಲ ಎಂದರು.
20 ಸ್ಥಾನಗಳನ್ನು ಗೆಲ್ಲಲಿದೆ
ಬಿಜೆಪಿ ಢೋಂಗಿತನದ ಮಾತುಗಳನ್ನು ಆಡುತ್ತಾರೆ. 28 ಕ್ಕೆ 28 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲಿದೆ. ನೀವು ಆಶೀರ್ವಾದ ಮಾಡುತ್ತೀರಿ ಎಂದು ನಂಬಿಕೆ ಇದೆ ಎಂದರು.
ಬಡವರಿಗೆ ಕೇಂದ್ರ ಅಕ್ಕಿ ನೀಡಲಿಲ್ಲ
ಜನರು ಹಸಿದು ಮಲಗಬಾರದು, ರಾಜ್ಯ ಹಸಿವುಮುಕ್ತವಾಗಬೇಕೆಂದು ಅನ್ನಭಾಗ್ಯ ಜಾರಿ ಮಾಡಲಾಯಿತು. ಬಡವರಿಗೆ ಅಕ್ಕಿ ನೀಡದ ಕೇಂದ್ರದ ಬಿಜೆಪಿ ಪಕ್ಷಕ್ಕೆ ಜನರು ಮತ ಹಾಕಬಾರದು. ಗ್ಯಾರಂಟಿ ಜಾರಿ ಮಾಡಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಟೀಕಿಸಿದ್ದರು. ನಾನು ಮಂಡಿಸಿದ ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ 52 ಸಾವಿರ ಕೋಟಿ ರೂ.ಗಳನ್ನು ಇಡಲಾಗಿದೆ. 8 ತಿಂಗಳ ಅವಧಿಯಲ್ಲಿ ಎಲ್ಲ 5 ಗ್ಯಾರಂಟಿಗಳನ್ನು ಸರಕಾರ ಜಾರಿ ಮಾಡಿದೆ ಎಂದರು
ಜಾತ್ಯಾತೀತ ಜೆಡಿಎಸ್ ಜಾತಿವಾದಿಗಳ ಜೊತೆ ಮೈತ್ರಿ
ಜೆಡಿಎಸ್ ಪಕ್ಷದವರು ತಮ್ಮ ಪಕ್ಷ ಸೋಲುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಜಾತ್ಯಾತೀತ ಪಕ್ಷ ಎಂದು ಹೇಳಿಕೊಂಡ ಜೆಡಿಎಸ್ ಅವರು ಜಾತಿವಾದಿಗಳ ಜೊತೆ ಸೇರಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಬರಲಿದೆ ಎಂಬ ವಿಶ್ವಾಸವಿದೆ. 2013-18 ರವರೆಗಿನ ನಮ್ಮ ಅವಧಿಯಲ್ಲಿ ಹೆಚ್ಚಿನ ಭರವಸೆಗಳನ್ನು ಈಡೇರಿಸಿದ್ದೆವು. ಬಿಜೆಪಿ ಹಾಗೂ ಜೆಡಿಎಸ್ ನಂತೆ ಸುಳ್ಳು ಹೇಳದೆ, ಕಾಂಗ್ರೆಸ್ ಪಕ್ಷ ಜನರಿಗಾಗಿ ಕೈಗೊಂಡಿರುವ ಕಾರ್ಯಕ್ರಮದ ಸತ್ಯದ ಆಧಾರದ ಮೇಲೆ ಮತ ಕೇಳಿ ಎಂದು ಕಾರ್ಯಕರ್ತರಿಗೆ ತಿಳಿಸಲಾಗಿದೆ ಎಂದರು.
ಬಿಜೆಪಿ ಅನ್ವರ್ಥನಾಮ ‘ಸುಳ್ಳಿನ ಪಕ್ಷ’
ರಾಜ್ಯಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕೊಡುಗೆ ಏನು? ಆದರೆ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕರ ಜನರ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿದೆ. ಬಿಜೆಪಿಯ ಅನ್ವರ್ಥ ನಾಮವೆಂದರೆ ಸುಳ್ಳಿನ ಪಕ್ಷ. ಸ್ವತಂತ್ರ ಭಾರತದಲ್ಲಿ ಪ್ರಧಾನಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಮತ್ತೊಬ್ಬರಿಲ್ಲ. 15 ಲಕ್ಷ ದೇಶದ ಜನರ ಖಾತೆಗೆ ಹಾಕುವ , ರೈತರ ಆದಾಯ ದುಪ್ಪಟ್ಟು, 7 ಕೋಟಿ ಉದ್ಯೋಗ ಸೃಷ್ಟಿಸುವ ಸುಳ್ಳು ಭರವಸೆಯನ್ನು ನೀಡಿ, ಈಡೇರಿಸಲಿಲ್ಲ ಎಂದರು.