ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ ವಾಪಸಾತಿಗೆ ಆಗ್ರಹಿಸಿ ವಿಧಾನಸಭೆಯಲ್ಲಿ ನಿರ್ಣಯ ಮಂಡನೆ

ಬೆಂಗಳೂರು: ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ ವಾಪಸಾತಿಗೆ ಆಗ್ರಹಿಸಿ ಬುಧವಾರ ವಿಧಾನಸಭೆಯಲ್ಲಿ ರಾಜ್ಯ ಸರಕಾರ ನಿರ್ಣಯ ಮಂಡಿಸಿದೆ.
ವಿಧಾನಸಭೆಯಲ್ಲಿ ನಿರ್ಣಯ ಮಂಡನೆ ಮಾಡಿದ ಸಚಿವ ಎಚ್.ಕೆ.ಪಾಟೀಲ್, ವಕ್ಫ್ ತಿದ್ದುಪಡಿ ಮಸೂದೆ ಏಕಪಕ್ಷೀಯವಾಗಿದೆ. ಜಂಟಿ ಸದನ ಸಮಿತಿ ಏಕಪಕ್ಷೀಯವಾಗಿ ಶಿಫಾರಸುಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಪ್ರತಿಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಜಂಟಿ ಸಂಸದೀಯ ಸಮಿತಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ. ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ವಕ್ಫ್ ವಿಚಾರದಲ್ಲಿ ರಾಜ್ಯ ಸರಕಾರಗಳ ಅನೇಕ ತೀರ್ಮಾನಗಳಿಗೆ ಪೆಟ್ಟು ಬೀಳಲಿದೆ. ರಾಜ್ಯ ಸರಕಾರಗಳ ಸ್ವಾಯತ್ತತೆಯನ್ನು ಈ ವಿಧೇಯಕ ಮೂಲಕ ಕೇಂದ್ರ ಹತ್ತಿಕ್ಕಲು ಹೊರಟಿದೆ. ವಕ್ಫ್ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು ಎಂದು ಕರ್ನಾಟಕ ಸರಕಾರ ಸರ್ವಾನುಮತದಿಂದ ಸದನದಲ್ಲಿ ನಿರ್ಣಯ ಕೈಗೊಂಡಿರುತ್ತದೆ ಎಂದು ನಿರ್ಣಯವನ್ನು ಎಚ್.ಕೆ.ಪಾಟೀಲ್ ಓದಿದರು.
ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸುವ ಸರಕಾರದ ನಿರ್ಣಯಕ್ಕೆ ಬಿಜೆಪಿ ತೀವ್ರವಾಗಿ ವಿರೋಧ ವ್ಯಕ್ತಪಡಿಸಿತು. ಈ ಕುರಿತ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಯಾವುದೇ ಕಾನೂನು ತಂದರೂ ಶೇ.50 ರಾಜ್ಯಗಳ ಒಪ್ಪಿಗೆ ಬೇಕು. ವಕ್ಫ್ ತಿದ್ದುಪಡಿ ಮಸೂದೆಗೆ ಶೇ.50 ಕ್ಕಿಂತ ಹೆಚ್ಚು ರಾಜ್ಯಗಳ ಒಪ್ಪಿಗೆ ಇದೆ. ಇದು ಹೇಗೆ ಪ್ರಜಾಪ್ರಭುತ್ವ ವಿರೋಧಿ ಮಸೂದೆ ಆಗುತ್ತೆ? ಎಂದು ಸರಕಾರದ ನಿರ್ಣಯಕ್ಕೆ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.