‘ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ’ ವಿರೋಧಿಸಿ ಸದನದಲ್ಲಿ ನಿರ್ಣಯ ಅಂಗೀಕಾರ

ಬೆಂಗಳೂರು : ‘ರಾಜ್ಯ ಸರಕಾರದ ಕಾರ್ಯಾಂಗ ಮತ್ತು ಶಾಸಕಾಂಗದ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸುವ, ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿರುವ ಕೇಂದ್ರ ಸರಕಾರವು ‘ವಕ್ಫ್ (ತಿದ್ದುಪಡಿ) ಮಸೂದೆ 2024’ ಅನ್ನು ತಕ್ಷಣವೇ ಹಿಂಪಡೆಯಬೇಕು’ ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಬುಧವಾರ ವಿಧಾನಸಭೆಯ ಅಧಿಕೃತ ನಿರ್ಣಯ ಮಂಡನೆ ಕಲಾಪದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಖಾತೆ ಸಚಿವ ಎಚ್.ಕೆ.ಪಾಟೀಲ್ ನಿರ್ಣಯವನ್ನು ಮಂಡಿಸಿದರು. ಈ ವೇಳೆ ವಿಷಯ ಪ್ರಸ್ತಾಪಿಸಿದ ಸಚಿವ ಎಚ್.ಕೆ.ಪಾಟೀಲ್, ‘ಕೇಂದ್ರ ಸರಕಾರದ ವಕ್ಫ್ (ತಿದ್ದುಪಡಿ) ಮಸೂದೆ ವಾಪಸಾತಿಗೆ ಆಗ್ರಹಿಸಿ ಸದನದಲ್ಲಿ ನಿರ್ಣಯ ಮಂಡನೆ ಮಾಡಲಾಗಿದೆ.
ವಕ್ಫ್ ತಿದ್ದುಪಡಿ ಮಸೂದೆ ಏಕಪಕ್ಷೀಯವಾಗಿದೆ. ಅಲ್ಲದೆ, ಲೋಕಸಭೆಯ ಜಂಟಿ ಸದನ ಸಮಿತಿ ಏಕಪಕ್ಷೀಯವಾಗಿ ಶಿಫಾರಸುಗಳನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಕನಿಷ್ಟ ಪಕ್ಷ ಪ್ರತಿಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ಜಂಟಿ ಸಂಸದೀಯ ಸಮಿತಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ. ಈ ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ಬಂದರೆ ವಕ್ಫ್ ವಿಚಾರದಲ್ಲಿ ರಾಜ್ಯ ಸರಕಾರಗಳ ಅನೇಕ ತೀರ್ಮಾನಗಳಿಗೆ ಪೆಟ್ಟು ಬೀಳಲಿದೆ ಎಂದು ಎಚ್.ಕೆ.ಪಾಟೀಲ್ ವಿವರಿಸಿದರು.
ವಕ್ಫ್ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಗಳ ಸ್ವಾಯತ್ತತೆಯನ್ನು ಈ ವಿಧೇಯಕ ಮೂಲಕ ಕೇಂದ್ರ ಸರಕಾರ ಹತ್ತಿಕ್ಕಲು ಹೊರಟಿದೆ. ಅಲ್ಲದೆ, ಈ ಕಾನೂನು ಪ್ರಜಾಸತಾತ್ಮಕ ಸ್ವರೂಪವನ್ನು ಮೊಟಕುಗೊಳಿಸಲಿದೆ. ಏಕೆಂದರೆ ಮಂಡಳಿಯು ಚುನಾಯಿತ ಸದಸ್ಯರನ್ನು ಹೊರತುಪಡಿಸಿ ನಾಮನಿರ್ದೇಶಿತ ಸದಸ್ಯರು ಮತ್ತು ನಾಮನಿರ್ದೇಶಿತ ಅಧ್ಯಕ್ಷರನ್ನು ಮಾತ್ರ ಹೊಂದಿರುತ್ತದೆ. ಇದು ಪ್ರಜಾಪ್ರಭುತ್ವ ವ್ಯವಸ್ಥಗೆ ವಿರುದ್ಧ ಎಂದು ಅವರು ಉಲ್ಲೇಖಿಸಿದರು.
ವಕ್ಫ್ ತಿದ್ದುಪಡಿ ಮಸೂದೆಯು ಮಂಡಳಿಯ ಕಾರ್ಯಗಳು ಮತ್ತು ಅಧಿಕಾರಗಳನ್ನು ದುರ್ಬಲಗೊಳಿಸುತ್ತದೆ ಅಥವಾ ರದ್ದುಗೊಳಿಸುತ್ತದೆ. ಜತೆಗೆ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ತತ್ವಗಳಿಗೆ ವಿರುದ್ಧವಾದ ದೃಷ್ಟಿಕೋನ ಹೊಂದಿದೆ. ಹೀಗಾಗಿ ಕೇಂದ್ರ ಸರಕಾರವು ‘ವಕ್ಫ್ ತಿದ್ದುಪಡಿ ಮಸೂದೆ’ಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ರಾಜ್ಯ ಸರಕಾರವು ಸರ್ವಾನುಮತದಿಂದ ಸದನದಲ್ಲಿ ನಿರ್ಣಯ ಕೈಗೊಂಡಿರುತ್ತದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಬಿಜೆಪಿ ಸಭಾತ್ಯಾಗ: ಕೇಂದ್ರ ಸರಕಾರದ ‘ವಕ್ಫ್ ತಿದ್ದುಪಡಿ ಮಸೂದೆ’ ಹಿಂಪಡೆಯಲು ಒತ್ತಾಯಿಸಿ ಸರಕಾರ ಕೈಗೊಂಡಿರುವ ನಿರ್ಣಯವನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಸದಸ್ಯರ ವಿರೋಧ ವ್ಯಕ್ತಪಡಿಸಿದರಲ್ಲದೆ, ಸಭಾತ್ಯಾಗ ಮಾಡಿ ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸರಕಾರ ಯಾವುದೇ ಒಂದು ಕಾನೂನು ಜಾರಿಗೆ ತಂದರೂ ದೇಶದ ಶೇ.50ರಷ್ಟು ರಾಜ್ಯಗಳ ಒಪ್ಪಿಗೆ ಅಗತ್ಯ. ಕೇಂದ್ರ ಸರಕಾರ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಗೆ ಶೇ.50ಕ್ಕಿಂತಲೂ ಹೆಚ್ಚು ರಾಜ್ಯಗಳ ಸಮ್ಮತಿ ಇದೆ ಎಂದು ಹೇಳಿದರು.
ವಾಸ್ತವ ಸ್ಥಿತಿ ಹೀಗಿರುವಾಗ ವಕ್ಫ್ ತಿದ್ದುಪಡಿ ಮಸೂದೆ ಜಾರಿ ಹೇಗೇ ಪ್ರಜಾಪ್ರಭುತ್ವ ವಿರೋಧಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಈ ಸರಕಾರಕ್ಕೆ ಇಷ್ಟೂ ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಹೇಗೇ?. ರಾಜ್ಯ ಸರಕಾರ ಕೈಗೊಂಡಿರುವ ಏಕಪಕ್ಷೀಯ ತೀರ್ಮಾನಕ್ಕೆ ನಮ್ಮ ವಿರೋಧವಿದೆ ಎಂದು ಅಶೋಕ್, ತಮ್ಮ ಪಕ್ಷದ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು.
ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಗದ್ದಲದ ನಡುವೆಯೇ ಸ್ಪೀಕರ್ ಯು.ಟಿ.ಖಾದರ್ ಅವರು ನಿರ್ಣಯವನ್ನು ಮತಕ್ಕೆ ಹಾಕಿದ ಸಂದರ್ಭದಲ್ಲಿ ನಿರ್ಣಯಕ್ಕೆ ಧ್ವನಿಮತದ ಅಂಗೀಕಾರವು ದೊರೆಯಿತು.