ಹುಲಿ ಚರ್ಮ ಹೋಲುವ ಶಾಲು ಹೊದ್ದು ಪ್ರತಿಭಟಿಸಿದ ವಾಟಾಳ್ ನಾಗರಾಜ್
ಬೆಂಗಳೂರು: ರಾಜ್ಯದಲ್ಲಿ ಕಳೆ ಎರಡ್ಮೂರು ದಿನದಿಂದ ಹುಲಿ ಉಗುರು ಭಾರೀ ಸಂಚಲನ ಮೂಡಿಸಿದ್ದು, ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್, ಚಾಲೆಜಿಂಗ್ ಸ್ಟಾರ್ ದರ್ಶನ್, ಜಗ್ಗೇಶ್ ಸೇರಿದಂತೆ ಹಲವರಿಗೆ ಉರುಳಾಗಿ ಪರಿಣಮಿಸುತ್ತಿದೆ. ಈ ಹಿನ್ನಲೆಯಲ್ಲಿ ಹುಲಿ ಹಾಗೂ ವನ್ಯ ಜೀವಿಗಳ ಸಂರಕ್ಷಣೆಗಾಗಿ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮಲ್ಲೇಶ್ವರದ ಅರಣ್ಯ ಭವನದ ಎದುರು ಪ್ರತಿಭಟನೆ ಮಾಡಿದರು.
ಹುಲಿ ಚರ್ಮದಂತಿರುವ ಶಾಲನ್ನು ಹೊದ್ದು ಪ್ರತಿಭಟಿಸಿದ ವಾಟಾಳ್ ನಾಗರಾಜ್ ಮಾತನಾಡಿ, ವನ್ಯ ಜೀವಿಗಳ ಸಂರಕ್ಷಣೆ ಮಾಡುವುದರಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ಕೇವಲ ಹುಲಿ ಉಗುರು ಮಾತ್ರವಲ್ಲದೇ ಬೇರೆ ವನ್ಯ ಜೀವಿಗಳ ಕೊಂದು ಅವುಗಳ ಚರ್ಮ ಹಾಗೂ ಆನೆ ದಂತ ಸೇರಿದಂತೆ ಅನೇಕ ವಸ್ತುಗಳನ್ನ ಆಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಕೂಡಲೇ ಇದರ ಬಗ್ಗೆ ತೀವ್ರ ತನಿಖೆ ನಡೆಸಬೇಕು ಎಂದು ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಒತ್ತಾಯಿಸಿದರು.
ಈ ವೇಳೆ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಮಾತನಾಡಿ, ನಿಖಿಲ್ ಕುಮಾರಸ್ವಾಮಿ ,ದರ್ಶನ್ ಅವರಿಂದ ವಶಕ್ಕೆ ಪಡೆದ ಉಗುರು ಮೇಲ್ನೋಟಕ್ಕೆ ನಕಲಿ ಎಂಬುದು ಪತ್ತೆಯಾಗಿದೆ. ಜಗ್ಗೇಶ್ ಮನೆಯಲ್ಲಿ ಸಿಕ್ಕಿರುವುದು ತುಂಬಾ ಹಳೆಯದಾಗಿದ್ದು, ನೈಜತೆ ಅರಿಯಲು ವಶಪಡಿಸಿಕೊಂಡ ಎಲ್ಲಾ ಉಗುರುಗಳನ್ನ ಕೂಲಂಕುಶವಾಗಿ ಪರಿಶೀಲಿಸಲಾಗುತ್ತದೆ. ಒಂದು ವೇಳೆ ಎಫ್ಎಸ್ಎಲ್ ವರದಿಯಲ್ಲಿ ಅಸಲಿ ಉಗುರುಗಳು ಯಾರ್ಯಾರು ಧರಿಸಿದ್ದಾರೆ ಎಂದು ಸಾಬೀತಾದರೆ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಇಂದು ಸಹ ಅರಣ್ಯ ಅಧಿಕಾರಿಗಳು ಕಾರ್ಯಚರಣೆ ಮುಂದುವರಿಸಿದ್ದು ಜ್ಯೋತಿಷಿ ಆರ್ಯವರ್ದನ್, ಸಚಿವ ಬೈರತಿ ಸುರೇಶ್ ಸಂಬಂಧಿಕರ ಮನೆ ಮೇಲೆದಾಳಿ ಮಾಡಿ ಪೆಂಟೆಂಟ್ ವಶಕ್ಕೆ ಪಡೆಯಲಾಗಿದೆ, ತುಮಕೂರಿನ ಧನಂಜಯ ಸ್ವಾಮೀಜಿ ಬಳಿ ಪತ್ತೆಯಾದ ಪೆಂಡೆಂಟ್ ವಶಪಡಿಸಿಕೊಳ್ಳಲಾಗಿದೆ ಅದನ್ನು ಎಫ್ಎಸ್ ಎಲ್ ಗೆ ರವಾನಿಸಲು ಸಿದ್ದತೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಚಿಕ್ಕಮಗಳೂರಿನಲ್ಲಿ ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಇಬ್ಬರು ಅರ್ಚಕರಾದ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸರನ್ನ ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಂಧಿಸಿ, ಮೂರು ಹುಲಿ ಉಗುರು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಮಾಹಿತಿ ನೀಡಿದರು.