ವಯನಾಡ್ ಭೂಕುಸಿತ | ಮೆಪ್ಪಾಡಿಯ ಸಂತ ಜೋಸೆಫ್ ಹೈಸ್ಕೂಲ್ನಲ್ಲಿ 40 ಕನ್ನಡಿಗರಿಗೆ ಆಶ್ರಯ
ಸಿಸ್ಟರ್ ಫಿಲೋಮಿನಾಗೆ ಧನ್ಯವಾದ ತಿಳಿಸಿದ ಸಚಿವ ಸಂತೋಷ್ ಲಾಡ್
PC : x/@SantoshSLadINC
ವಯನಾಡ್ : ಕೇರಳದ ವಯನಾಡಿನ ಮೆಪ್ಪಾಡಿಯಲ್ಲಿನ ಸಂತ ಜೋಸೆಫ್ ಹೈಸ್ಕೂಲ್ನಲ್ಲಿ ಗುಡ್ಡ ಕುಸಿತದಿಂದ ತೊಂದರೆಗೊಳಗಾಗಿರುವ ಜನರಿಗೆ ತಾತ್ಕಾಲಿಕ ಆಶ್ರಯ ಒದಗಿಸಲಾಗಿದ್ದು, ಇಲ್ಲಿ 40 ಕನ್ನಡಿಗರಿಗೂ ಆಶ್ರಯ ನೀಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ನೀಡಿರುವ ಅವರು, ಗುಡ್ಡ ಕುಸಿತ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದುಕೊಂಡಿರುವ ಕನ್ನಡಿಗರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದೆ. ಅಲ್ಲದೆ, ಜನರಿಗೆ ಆಶ್ರಯ ನೀಡಿ ಸಹಾಯ ಮಾಡಿರುವ ಸಿಸ್ಟರ್ ಫಿಲೋಮಿನಾ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದೇನೆ.
ವಯನಾಡಿನ ಮೂರು ಗ್ರಾಮಗಳು ಮಳೆ ಹಾಗೂ ಗುಡ್ಡ ಕುಸಿತದಿಂದ ಸಾಕಷ್ಟು ಹಾನಿಗೊಳಗಾಗಿದ್ದು, ಮೃತರ ಸಂಖ್ಯೆ ಏರುತ್ತಲೇ ಇದೆ. ರಕ್ಷಣಾ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ. ತೊಂದರೆಗೊಳಗಾಗಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅವರಿಗೆ ಅಗತ್ಯ ನೆರವನ್ನು ಒದಗಿಸಲಾಗುತ್ತಿದೆ. ನಮ್ಮ ರಾಜ್ಯ ಸರ್ಕಾರ ಸಹ ಎಲ್ಲಾ ರೀತಿಯಲ್ಲಿ ಸಹಾಯಕ್ಕೆ ಧಾವಿಸಿದೆ. ನಿಯೋಜಿತ ಅಧಿಕಾರಿಗಳೊಡನೆ ಚರ್ಚಿಸಿ, ಅಗತ್ಯ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ.