ವಯನಾಡ್ ಭೂಕುಸಿತ : ಜನರ ಸಂಕಷ್ಟಕ್ಕೆ ಮಿಡಿದ ಕರ್ನಾಟಕ
ನೆರವು ಒದಗಿಸಿದವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ
PC: x.com/IndianExpress
ಬೆಂಗಳೂರು : ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ತೊಂದರೆಗೊಳಗಾದ ಜನರ ಸಂಕಷ್ಟಕ್ಕೆ ಕರ್ನಾಟಕ ರಾಜ್ಯವು ಮಿಡಿದಿದೆ.
ರಾಜ್ಯ ಸರಕಾರವು ಘಟನೆ ಸಂಭವಿಸಿದೊಡನೆಯೇ ರಕ್ಷಣೆ ಮತ್ತು ಪರಿಹಾರ ಕಾರ್ಯಕ್ಕೆ ಕೈಜೋಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಯನಾಡಿನಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನೂರು ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಭರವಸೆ ನೀಡಿದ್ದಾರೆ. ಇದರೊಂದಿಗೆ ರಾಜ್ಯದ ಕೈಗಾರಿಕೋದ್ಯಮಿಗಳು, ಖಾಸಗಿ ಸಂಘ ಸಂಸ್ಥೆಗಳೂ ವಿವಿಧ ರೂಪದಲ್ಲಿ ನೆರವಾಗಲು ಮುಂದಾಗಿವೆ.
ಮೈಸೂರು ಜಿಲ್ಲಾಡಳಿತವು ವೈದ್ಯರ ತಂಡದೊಂದಿಗೆ 15 ಫ್ರೀಜರ್ ಬಾಕ್ಸ್ ಗಳು, ನಾಲ್ಕು ಟ್ರಾಕ್ಟರ್ ಮೌಂಟೆಡ್ ಕಂಪ್ರೆಸರ್ ಮತ್ತು ಜಾಕ್ ಹ್ಯಾಮರ್, 500 ಬಾಡಿ ಬ್ಯಾಗ್ಗಳು, ತುರ್ತು ಸಂದರ್ಭಗಳಲ್ಲಿ ಬಳಸುವ 15 ದೀಪಗಳ ವ್ಯವಸ್ಥೆ, 40 ಸ್ಟ್ರೆಚರ್ ಗಳು, 288 ಗಮ್ಬೂಟ್ಗಳು, 5 ಸ್ಟೀಲ್ ಕಟ್ಟರ್ ಳು, 10 ಗ್ಯಾಸ್ ಕಟ್ಟರ್ ಗಳು, 2040 ನ್ಯಾಪ್ಕಿನ್ಗಳು, ಒಂದು ಸಾವಿರ ಗ್ಲೋವ್ಗಳು, 2050 ಮಾಕ್ಸ್ ಗಳು, ಒಂದು ಸಾವಿರ ಬಾಟಲ್ ಸ್ಯಾನಿಟೈಸರ್ ಗಳು ಹಾಗೂ ಆರೋಗ್ಯ ಇಲಾಖೆಯ ಔಷಧಿಗಳನ್ನು ಒದಗಿಸಿದೆ.
ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ವತಿಯಿಂದ 250 ಎಂ.ಎಲ್. ನ 1008 ನೀರಿನ ಬಾಟಲ್ಗಳು, 100 ರೇನ್ಕೋಟ್ಗಳು, 500 ಬಾಟಲ್ ಸ್ಯಾನಿಟೈಸರ್ ಗಳು, 15 ಟೆಂಟ್ಗಳು, ಒಂದು ಸಾವಿರ ಪಿಪಿಇ ಕಿಟ್ಗಳು, 5 ಸಾವಿರ ಗ್ಲೋವ್ಗಳು, 3 ಸಾವಿರ 3-ಪ್ಲೈ ಮಾಕ್ಸ್ ಗಳು ಹಾಗೂ 8 ಸಾವಿರ ಎನ್-95 ಮಾಸ್ಕ್ ಗಳನ್ನು ಕಳುಹಿಸಲಾಗಿದೆ.
ವೋಲ್ವೋ ಸಂಸ್ಥೆಯಿಂದ 2 ಸಾವಿರ ಪ್ಯಾಕ್ ಸ್ಯಾನಿಟರಿ ಪ್ಯಾಡ್ಗಳು, 100 ಪಿಪಿಇ ಕಿಟ್ಗಳು ಹಾಗೂ ಎರಡು ಟ್ರಕ್ಗಳನ್ನು ಒದಗಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಸಂಘದ ಸದಸ್ಯ ಸಂಸ್ಥೆಗಳು ಮತ್ತು ಪ್ರಣವ್ ಫೌಂಡೇಷನ್ ವತಿಯಿಂದ 40 ಸ್ಟ್ರೆಚರ್ ಗಳು, 250 ಬಾಡಿ ಬ್ಯಾಗ್ಗಳು, ಒಂದು ಸಾವಿರ ಎನ್-95 ಮಾಸ್ಕ್ ಗಳು, 500 ಬಾಟಲ್ ಸ್ಯಾನಿಟೈಸರ್ ಗಳು, ಒಂದು ಸಾವಿರ ಗ್ಲೋವ್ಗಳು ಹಾಗೂ ಒಂದು ಟ್ರಕ್ ಒದಗಿಸಲಾಗಿದೆ.
ಬಯೋಕಾನ್ ಮತ್ತು ಭಾಗೀದಾರ ಸಂಸ್ಥೆಗಳಾದ ನಾರಾಯಣ ಹೆಲ್ತ್ ಮತ್ತು ಸಿಂಜೀನ್ ಸಂಸ್ಥೆಗಳಿಂದ 2200 ಮಾಸ್ಕ್ ಗಳು, 100 ಉತ್ತಮ ಗುಣಮಟ್ಟದ ರೇನ್ ಕೋಟ್ಗಳು, 400 ಲೀಟರ್ ಸ್ಯಾನಿಟೈಸರ್, 5 ಕಾರ್ಟನ್ಗಳಷ್ಟು ಬೆಡ್ಶೀಟ್ ಮತ್ತು ಬಟ್ಟೆ ಹಾಗೂ 250 ಪಿಪಿಇ ಕಿಟ್ಗಳನ್ನು ಕಳುಹಿಸಲಾಗಿದೆ.
ಆಶಯ ಟ್ರಸ್ಟ್ ಹಾಗೂ ಉತ್ತಿಷ್ಠ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ ಒಂದು ಸಾವಿರ ಬ್ಲಾಂಕೆಟ್ ಮತ್ತು ಟಾರ್ಪಾಲಿನ್ಗಳು ಹಾಗೂ ಎರಡು ಅಂಬ್ಯುಲೆನ್ಸ್ ಗಳನ್ನು ಒದಗಿಸಲಾಗಿದೆ. ಅವರು 25 ಲಕ್ಷ ರೂ. ಆರ್ಥಿಕ ನೆರವು ಒದಗಿಸಿದ್ದಾರೆ. ವಯನಾಡಿಗೆ ಪರಿಹಾರ ಸಾಮಗ್ರಿಗಳು, ವೈದ್ಯಕೀಯ ಸಲಕರಣೆಗಳು ಮತ್ತಿತರ ನೆರವು ಒದಗಿಸಿ ಮಾನವೀಯತೆ ಮೆರೆದ ಎಲ್ಲ ಸಂಸ್ಥೆಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.