ವಿವೇಕಾನಂದರ ಹಿಂದುತ್ವ ಒಪ್ಪುತ್ತೇವೆ, ಇಂದಿನವರ ಹಿಂದುತ್ವ ಒಪ್ಪಲ್ಲ: ಶಶಿ ತರೂರ್
ಶಶಿ ತರೂರ್ ಅವರ ‘ನಾನು ಯಾಕೆ ಹಿಂದೂ’ ಕನ್ನಡ ಅನುವಾದಿತ ಕೃತಿ ಬಿಡುಗಡೆ
ಬೆಂಗಳೂರು, ಅ.6: ಎಲ್ಲರನ್ನೂ ಒಳಗೊಳ್ಳುವುದೇ ಹಿಂದೂ, ಹಿಂದುತ್ವ ಬದುಕಿನ ಕ್ರಮ, ಅದು ಯಾರೊಬ್ಬರಿಗೂ ಸೇರುವುದಲ್ಲ, ಸ್ವಾಮಿ ವಿವೇಕಾನಂದರ ಹಿಂದುತ್ವ ನಾವು ಒಪ್ಪುತ್ತೇವೆ ಇಂದಿನವರ ಹಿಂದುತ್ವವನ್ನು ನಾನು ಒಪ್ಪಲ್ಲ, ನನ್ನ ಕೃತಿಯಲ್ಲಿಯೂ ಇದನ್ನೇ ಹೇಳಿದ್ದೇನೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ನಗರದ ಲ್ಯಾವೆಲ್ಲ ರಸ್ತೆಯ ರೋಟರಿ ಸಭಾಂಗಣದಲ್ಲಿ ನಡೆದ ಕೇಂದ್ರದ ಮಾಜಿ ಸಚಿವ ಕಾಂಗ್ರೆಸ್‍ನ ಹಿರಿಯ ನಾಯಕ ಶಶಿ ತರೂರ್ ಅವರ ಇಂಗ್ಲೀಷ್ ಕೃತಿ ‘ವೈ ಐ ಆ್ಯಮ್ ಎ ಹಿಂದೂ’ ಕೃತಿಯ ಕನ್ನಡ ಅವತರಣಿಕೆ ಪ್ರೊ.ಕೆ.ಈ ರಾಧಾಕೃಷ್ಣ ಅನುವಾದಿತ ‘ನಾನು ಯಾಕೆ ಹಿಂದೂ’ ಕೃತಿ ಬಿಡುಗಡೆಯಲ್ಲಿ ಮಾತನಾಡಿದ ಅವರು, ನನ್ನ ಸತ್ಯವನ್ನು ನೀವು ಗೌರವಿಸಿ ನಿಮ್ಮ ಸತ್ಯವನ್ನು ನಾವು ಗೌರವಿಸುತ್ತೇವೆ ಎನ್ನುವುದೇ ಹಿಂದುತ್ವ ಎಂದರು.
ಹಿಂದೂ ಧರ್ಮದಲ್ಲಿ ದೇವರು ನಿರ್ಗುಣ ತತ್ವದ ನಿರಾಕಾರಣಿ, ಅವನಿಗೆ ಹುಟ್ಟು ಸಾವು, ಆಕಾರ ಇಲ್ಲ, ಆತ ನಿರ್ಮೋಹಿ, ಆಸೆ ಆಕಾಂಕ್ಷೆ ಮೋಕ್ಷ ಯಾವುದೂ ಇಲ್ಲ, ಆತ ಎಲ್ಲವೂ ಆವರಿಸಿರುವ ಸವಾರ್ಂತರ್ಯಾಮಿ. ಈ ವಿಚಾರ ಬರೀ ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಇಸ್ಲಾಂ ಧರ್ಮದಲ್ಲಿಯೂ ಇದೆ. ಹಾಗಾದರೆ ಹಿಂದೂ ಯಾರು ಹಿಂದುತ್ವ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು.
ಕೆಲವರು ಗರ್ವದಿಂದ ಹೇಳು ನಾನೊಬ್ಬ ಹಿಂದೂ ಎನ್ನುತ್ತಾರೆ ಹಿಂದೂ ಎಂದರೆ ವಿದೇಶಿಗರಿಗೆ ಗೊತ್ತಾಗುತ್ತಾ, ಅವರೆಲ್ಲಾ ನಮ್ಮನ್ನು ಇಂಡಿಯನ್ಸ್ ಎಂದು ಕರೆಯುತ್ತಾರೆ ಹಾಗಾದರೆ ಇಂಡಿಯನ್ಸ್ ಯಾರು, ಸಿಂಧೂ ಇಂದ ಇಂಡಸ್ ವ್ಯಾಲಿ ಆಗಿ ಇಂಡಿಯನ್ ಆಗಿದ್ದೇವೆ. ಆದರೆ ಆಡಳಿತ ಪಕ್ಷದ ನಾಯಕರು ಇಂಡಿಯಾ ಪದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಶಶಿ ತರೂರ್ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ರಾಂತ ನ್ಯಾಯಾಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿದ, ಈ ಕೃತಿಯಲ್ಲಿ ಶಶಿ ತರೂರ್ ಯಾಕೆ ಹಿಂದೂ ಧರ್ಮದಲ್ಲಿದ್ದೇನೆ ಎನ್ನುವುದಕ್ಕೆ ವಿವರಣೆ ನೀಡಿದ್ದಾರೆ, ಧರ್ಮದ ನ್ಯೂನತೆಯ ಬಗೆಗೂ ಚರ್ಚೆ ಮಾಡಿದ್ದಾರೆ, ಬಹಳಷ್ಟು ವಿಚಾರದಲ್ಲಿ ಸರಿ ಎನ್ನುವುದು ನನ್ನ ಅಭಿಪ್ರಾಯ, ಈ ಕೃತಿ ಧರ್ಮದ ವಿಚಾರದ ಚರ್ಚೆ ಮಾಡುವವರು ಓದುವ ಕೃತಿಯಾಗಿದೆ, ಉತ್ತಮ ವಿಚಾರಗಳನ್ನು ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು.
ಕಾನೂನು ಸಚಿವ ಎಚ್.ಕೆ ಪಾಟೀಲ್ ಮಾತನಾಡಿ, ನಾನು ಹಿಂದೂ ಹೌದೋ ಅಲ್ಲವೋ ಮುಖ್ಯ ಅಲ್ಲ, ಹಿಂದೂ ಧರ್ಮದ ಚರ್ಚೆ, ವಾದ ವಿವಾದ ಮಾಡಿ, ದೊಡ್ಡ ಸಮಸ್ಯೆ ಸೃಷ್ಟಿ ಮಾಡುವುದು ಇಂದಿನ ಅವಶ್ಯಕತೆ ಅಲ್ಲ, ಗಾಂಧಿ, ವಿವೇಕಾನಂದರ ಕಲ್ಪನೆ ಏನಿತ್ತು ಅದು ಮುಖ್ಯ. ಗಣೇಶ, ಎಲ್ಲಮ್ಮ ಸೇರಿ ಎಲ್ಲ ದೇವರುಗಳು ಇರಬಹುದು ಆದರೆ ನೂರು ದೇವರುಗಳ ನೂಕಾಚೆ ದೂರ ಎನ್ನುವ ಕುವೆಂಪು ಆಶಯದಂತೆ ಎಲ್ಲ ಜೀವಿಗಳಲ್ಲಿ ದೇವನಿದ್ದಾನೆ ಎನ್ನುವ ಕಲ್ಪನೆ, ಗಾಂಧಿಯ ಶ್ರದ್ಧೆ ಅಳವಡಿಸಿಕೊಂಡು ಬದುಕು ನಡೆಸಿದರೆ ಶ್ರೇಷ್ಠ ಬದುಕು ನಡೆಸಬಹುದು ಅದರ ಅಗತ್ಯತೆ ಇಂದಿಗಿದೆ ಎಂದರು.
ಕಾರ್ಯಕ್ರಮದಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ಹಿರಿಯ ಸಾಹಿತಿಗಳಾದ ಹಂಪ ನಾಗರಾಜಯ್ಯ, ಕಮಲಾ ಹಂಪನಾ ಉಪಸ್ಥಿತರಿದ್ದರು.