ತಿಹಾರ್ ಜೈಲಿನಲ್ಲಿ ಕೊಟ್ಟಮಾತಿನಂತೆ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದೇವೆ: ಡಿಸಿಎಂ ಡಿ.ಕೆ.ಶಿವಕುಮಾರ್
Photo: X/@DKShivakumar
ಬೆಂಗಳೂರು: ನಾನು ತಿಹಾರ್ ಜೈಲಿನಲ್ಲಿದ್ದಾಗ ಎಐಸಿಸಿ ಮುಖಂಡರಾದ ಸೋನಿಯಾ ಗಾಂಧಿಯವರಿಗೆ ಕೊಟ್ಟ ಮಾತಿನಂತೆ ಯಾರ ಸಹಾಯ, ಸಹಕಾರವೂ ಇಲ್ಲದೇ ಸ್ವತಂತ್ರವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರವಿವಾರ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರು ತಿಹಾರ್ ಜೈಲಿಗೆ ಬಂದು ನಾನು ನೀಡುವ ಜವಾಬ್ದಾರಿ ನಿರ್ವಹಿಸಬೇಕೆಂದು ಹೇಳಿದರು. ಅದರಂತೆ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರು. ನಂತರ ನಾನು, ಸಿದ್ದರಾಮಯ್ಯ ಅವರು ಸೇರಿ ಪಕ್ಷಕ್ಕೆ ಧಕ್ಕೆಯಾಗದಂತೆ ಸಂಘಟನೆ ಮಾಡಿದೆವು ಎಂದು ಸ್ಮರಿಸಿದರು.
ಜಾಫರ್ ಶರೀಫ್ ಅವರು ರೈಲ್ವೆ ಸಚಿವರಾಗಿದ್ದಾಗ ನಾನು ವಿದ್ಯಾರ್ಥಿ ನಾಯಕನಾಗಿ ರೈಲು ತಡೆದು ಚಳುವಳಿ ಮಾಡಿದ್ದ ಫೋಟೋ ಕಾಣಿಕೆಯೊಂದಿಗೆ ನನಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿದ್ದೀರಿ. 43 ವರ್ಷಗಳ ರಾಜಕೀಯ ಜೀವನದಲ್ಲಿ ಎಂದೂ ಪ್ರಶಸ್ತಿ ತೆಗೆದುಕೊಂಡಿರಲಿಲ್ಲ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮನ್ನು(ಮಾಧ್ಯಮಗಳನ್ನು) ಬಿಟ್ಟು ನಮ್ಮ ಬದುಕಿಲ್ಲ. ಹೀಗಾಗಿ ನಾನು ಒಪ್ಪಿ ಈ ಗೌರವ ಸ್ವೀಕರಿಸಿದ್ದೇನೆ ಎಂದು ಹೇಳಿದರು.
ಪತ್ರಿಕೋದ್ಯಮದ ಘನತೆ, ಗೌರವ ಕಾಪಾಡಿಕೊಳ್ಳಿ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಿಮ್ಮ ಲೇಖನಿ ಬಳಸಿ. ವ್ಯಾಪಾರಸ್ಥರ ಲಾಭಕ್ಕೆ ತಲೆಬಾಗಬೇಡಿ. ನೀವು ಒಳ್ಳೆಯದಾದರೂ ಹೇಳಿ, ಕೆಟ್ಟದಾದರೂ ಹೇಳಿ. ಸಂಸಾರದಂತೆ ನಿಮ್ಮ ಜತೆ ಬದುಕಬೇಕು ಎಂದು ಅವರು ಹೇಳಿದರು.
ನೀವು ನನಗೆ ಕನಕಪುರದ ಬಂಡೆ ಎಂದು ಬಿರುದು ಕೊಟ್ಟಿರಿ. ಬಂಡೆ ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ನಾನು ಹೇಳಿದ್ದೆ. ನೀವು ನನಗೆ ಟ್ರಬಲ್ ಶೂಟರ್ ಎಂಬ ಹೆಸರು ಕೊಟ್ಟಿದ್ದೀರಿ. ಇದೆಲ್ಲದರ ಸೃಷ್ಟಿಕರ್ತರು ನೀವೇ. ಇಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲವೂ ನೀವೇ. ತೆಗಳುವವರು ನೀವೇ, ಹೋಗಳುವವರೂ ನೀವೇ. ಮೇಲೆ ಕೂರಿಸುವವರೂ ನೀವೇ, ಕೆಳಗೆ ಬೀಳಿಸುವವರೂ ನೀವೇ. ನೀವು ಏನಾದರೂ ಮಾಡಿ, ಆದರೆ ಸತ್ಯವನ್ನು ಬರೆಯಿರಿ ಅವರು ಹೇಳಿದರು.
‘ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದಾಗ ಗಂಡ-ಹೆಂಡತಿ, ಅತ್ತೆ-ಸೊಸೆ ಮಧ್ಯೆ ಜಗಳ ತಂದಿಡುತ್ತಾರೆ. ಕರ್ನಾಟಕ ಆರ್ಥಿಕ ಸಮಸ್ಯೆಗೆ ಸಿಲುಕಿ ಪಾಕಿಸ್ತಾನ, ಶ್ರೀಲಂಕಾ ದುಸ್ಥಿತಿ ಬರುತ್ತದೆ ಎಂದು ಬರೆದರು. ನಾವು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ’
-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ