ದುರುದ್ದೇಶಪೂರ್ವಕವಾಗಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ಪ್ರತಿಭಟನೆ ಮಾಡುತ್ತೇವೆ: ಆರಗ ಜ್ಞಾನೇಂದ್ರ
ಚೈತ್ರಾ ಕುಂದಾಪುರ ಪ್ರಕರಣದ ಬಗ್ಗೆ ಮಾಜಿ ಗೃಹ ಸಚಿವರ ಪ್ರತಿಕ್ರಿಯೆ
ಶಿವಮೊಗ್ಗ, ಸೆ.13: ʼಚೈತ್ರಾ ಕುಂದಾಪುರ ಅವರು ವಂಚನೆ ಮಾಡಿದ್ದಾರೆ ಎಂದರೆ ತನಿಖೆ ಆಗಲಿ, ಕಾನೂನು ಕ್ರಮ ಆಗಲಿʼ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಚೈತ್ರಾ ಕುಂದಾಪುರ ಬಂಧನ ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ವಂಚನೆ ಮಾಡಿದ್ದಾರೆ ಎಂದರೆ ತನಿಖೆ ಆಗಲಿ, ಕಾನೂನು ಕ್ರಮ ಆಗಲಿಆದರೆ ಅನಾವಶ್ಯಕ ಹಾಗೂ ದುರುದ್ದೇಶಪೂರ್ವಕವಾಗಿ ಹಿಂದೂ ಕಾರ್ಯಕರ್ತರನ್ನು ಬಂಧಿಸಿದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.
ಸಚಿವ ಡಿ.ಸುಧಾಕರ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು,ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ.ಸುಧಾಕರ್ ಗೆ ಒಂದು ಕಾನೂನು ಬೇರೆಯವರಿಗೊಂದು ಕಾನೂನು ಇಲ್ಲ.ಕಾನೂನಿಗೆ ವಿರುದ್ಧವಾಗಿದ್ದರೆ ಸುಧಾಕರ್ ವಿರುದ್ಧ ಕ್ರಮ ಆಗಲಿ, ವಿಚಾರಣೆ ಆಗಲಿ,ಸತ್ಯಾಸತ್ಯತೆ ಹೊರಬರಲಿ ಎಂದರು.
ʼಸುಧಾಕರ್ ನ್ನು ಡಿಸಿಎಂ ಸಮರ್ಥಿಸಿಕೊಂಡಿದ್ದಾರೆ.ಸಿಎಂ ಸಮರ್ಥಿಸಿಕೊಂಡಿರುವುದು ಗೊತ್ತಿಲ್ಲ.ದಲಿತರಿಗೆ ದೌರ್ಜನ್ಯ ಅನ್ಯಾಯ ಆಗಬಾರದುʼ ಎಂದರು.
ʼರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ.ಮಲೆನಾಡಿನಲ್ಲಿ ಇಷ್ಟು ಮಳೆ ಕಡಿಮೆಯಾಗಿರುವುದು ನನ್ನ ಜೀವನದಲ್ಲಿ ನಾನೂ ನೋಡಿರಲಿಲ್ಲ. ಜಮೀನ ನಲ್ಲಿ ಅರ್ಧಂಬರ್ಧ ನಾಟಿಯಾಗಿದೆ. ಇನ್ನೆರಡು ತಿಂಗಳಲ್ಲಿ ನೀರಿನ ಅಭಾವ ಸಹ ತಲೆದೋರಲಿದೆ.ತೀರ್ಥಹಳ್ಳಿ, ಹೊಸನಗರ ಸೇರಿದಂತೆ ಉಳಿದ ತಾಲೂಕುಗಳಲ್ಲೂ ಮಳೆ ಕೊರತೆಯಾಗಿದೆ ತಕ್ಷಣವೇ ಬರ ಘೋಷಣೆ ಮಾಡಬೇಕು. ಇದಕ್ಕೆ ಮೀನಾಮೇಷ ಎಣಿಸಬಾರದು.ಈ ಹಿಂದೆ ಅತಿವೃಷ್ಟಿಯಾದಾಗ ರಾಜ್ಯ ಸರ್ಕಾರದಿಂದ ಪರಿಹಾರ ಕೊಟ್ಟು ಸಾಂತ್ವನ ಹೇಳಿದ್ದೇವು ಅದೇ ರೀತಿ ಬರಗಾಲದ ಈ ಸಂದರ್ಭದಲ್ಲಿ ಸರ್ಕಾರ ಜನರ ನೆರವಿಗೆ ಬರಬೇಕುʼ ಎಂದು ಒತ್ತಾಯಿಸಿದರು.