ಪಂಚೆಯೊಳಗೆ ಖಾಕಿ ಚಡ್ಡಿ ಹಾಕಿ ಸಮಾಜವಾದಿ ಅಂದ್ರೆ ಆಗೋದಿಲ್ಲ: ಸಿಎಂ ವಿರುದ್ಧ ಬಿ.ಕೆ ಹರಿಪ್ರಸಾದ್ ಪರೋಕ್ಷ ವಾಗ್ದಾಳಿ
ʻʻದೇವರಾಜು ಅರಸು ಅವರ ಕಾರಿನಲ್ಲಿ ಕುಳಿತರೆ ದೇವರಾಜು ಅರಸು ಆಗಲ್ಲʻʻ
ಫೋಟೊ- twitter @AradhyavsB
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನದ ಮಾತುಗಳನ್ನು ಆಡಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯ ಅವರ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಸಭೆಯಲ್ಲಿ ಮಾತನಾಡಿದ ಅವರು, ‘ಅರಸು, ಬಂಗಾರಪ್ಪ ಸೇರಿದಂತೆ ಹಿಂದಿನ ಯಾವ ಮುಖ್ಯಮಂತ್ರಿಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು, ವಾಚ್ ಕಟ್ಟಿಕೊಂಡು, ಖಾಕಿ ಚಡ್ಡಿ ಹಾಕಿಕೊಂಡು ‘ಸಮಾಜವಾದಿ’ ಎಂದು ಹೇಳಿದರೆ ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನ್ನನ್ನು ಮಂತ್ರಿ ಮಾಡದಿದ್ದಕ್ಕೆ ರಾಜ್ಯದ ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುತ್ತೇನೆ. ನಾನು ಮಂತ್ರಿ ಆಗಿದ್ದರೆ ಸಮುದಾಯದ ಜನರ ಜೊತೆಗೆ ಇರಲು ಸಾಧ್ಯವಾಗುತ್ತಿರಲ್ಲಿ. ನಾನು ಮುಖ್ಯಮಂತ್ರಿ ಅಥವಾ ಮಂತ್ರಿ ಆಗುತ್ತೇನೆಂದು ಸಮುದಾಯದ ಜನರು ಯಾರೂ ಭ್ರಮೆಯಲ್ಲಿರಬೇಡಿ. ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದವರು ಕೇವಲ ರಾಜ್ಯದಲ್ಲಿ ಮಾತ್ರವಲ್ಲ, ಎಲ್ಲ ರಾಜ್ಯಗಳಲ್ಲೂ ಇದ್ದಾರೆ. ಸಮುದಾಯಗಳ ಪರ ಸಾಮಾಜಿಕ ನ್ಯಾಯಕ್ಕಾಗಿ ಸದಾ ದನಿ ಎತ್ತುತ್ತೇನೆ ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.
ನಾನು ಮೂರು ಬಾರಿ ಸೋತಿರಬಹುದು, ಆದರೆ ಇನ್ನೂ ಸತ್ತಿಲ್ಲ. ಸೈಟು ಕಳ್ಳತನ ಮಾಡಿ ಮಾರುವವನು ನನ್ನ ಬಗ್ಗೆ ಮಾತನಾಡುತ್ತಾನೆ. ಆದರೆ ನಾನು ಎಂದಿಗೂ ಸ್ವಾಭಿಮಾನ ಬಿಟ್ಟು ಸಹನೆ ಕಳೆದುಕೊಂಡವನಲ್ಲ. ನನ್ನ ಧ್ವನಿ ಹತ್ತಿಕ್ಕಲೂ ಯಾರಿಂದಲೂ ಸಾಧ್ಯವಿಲ್ಲ. ರಾಜಕೀಯವಾಗಿ ತಳಮಳಗೊಂಡಿದ್ದೇನೆಂಬ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
ನಮ್ಮ ಸಮುದಾಯ ಅತಂತ್ರವಾಗಿದೆ. ಇದು ಅತಂತ್ರ ಸಮುದಾಯದ ವೇದಿಕೆ. ಚುನಾವಣೆ ಬರುವಾಗ ಘೋಷಣೆ ಮಾಡಿದ್ದೇ, ಮಾಡಿದ್ದು. ಅಧಿಕಾರಕ್ಕೆ ಬರಲು ಏನೇನೋ ಭರವಸೆ ನೀಡಿದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಅತೀ ಹಿಂದುಳಿದ ವರ್ಗಗಳು ನೆನಪೇ ಆಗಿಲ್ಲ. ಅಧಿಕಾರ ಸಿಕ್ಕ ತಕ್ಷಣವೇ ಸಮುದಾಯಕ್ಕೆ ಕೊಡಬೇಕಾಗಿರುವುದು ಇನ್ನೂ ಸಿಕ್ಕಿಲ್ಲ. ಸಮುದಾಯದ ಶಕ್ತಿ ಏನೂ ಎನ್ನುವುದನ್ನು ನಾವೇ ಇನ್ನೂ ತಿಳಿದುಕೊಂಡಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ದಲಿತರನ್ನು ಕಡೆಗಣಿಸಲಾಗಿದೆ:
‘ಸಂಪುಟದಲ್ಲಿ ಹಿರಿಯರಾಗಿರುವ ಡಾ.ಜಿ.ಪರಮೇಶ್ವರ್, ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲ್ಲ ವಿಧದಲ್ಲಿಯೂ ಅರ್ಹರಾಗಿದ್ದಾರೆ. ಅವರಿಗೆ ಅನುಭವವಿದೆ. ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿ ಆಗಿರುವಂಥವರು. ಅವರನ್ನು ಮುಖ್ಯಮಂತ್ರಿಯನ್ನಾಗಿಸಬಹುದಿತ್ತು. ಆದರೆ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಸತೀಶ್ ಜಾರಕಿಹೊಳಿಯವರು ಸಹ ಹಿರಿಯರಾಗಿದ್ದು, ಕಾಂಗ್ರೆಸ್ಸಿಗೆ ವಿಧೇಯರಾಗಿರುವಂಥವರು. ಅನುಭವದಲ್ಲಿ, ಜ್ಞಾನಾರ್ಜನೆಯಲ್ಲಿ ಅವರೂ ಸಹ ಮುಂದಿದ್ದಾರೆ. ಹೈಕಮಾಂಡ್ ಮನಸ್ಸು ಮಾಡಿದ್ದರೆ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಸಬಹುದಿತ್ತು. ಆದರೆ, ಹಾಗೆ ಮಾಡಲಿಲ್ಲ. ಉಪಮುಖ್ಯಮಂತ್ರಿ ವಿಚಾರದಲ್ಲಿಯೂ ದಲಿತರನ್ನು ಕಡೆಗಣಿಸಲಾಗಿದೆ’ ಎಂದು ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ
ʻʻನನ್ನ ಹೆಸರು ಹೇಳಿದ್ದಾರಾ? ಹೆಸರು ಹೇಳಿಲ್ಲ. ಇಂಥ ಹೇಳೀಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಧಾರವಾಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.