ಕೆಎಸ್ಸಾರ್ಟಿಸಿ ಬಸ್, ದೇವಾಲಯಗಳಲ್ಲಿ ಮಾಸ್ಕ್ ಧರಿಸಿ: ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು: ‘ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಕಾರದ ಮಾರ್ಗಸೂಚಿಯಂತೆ ಕೆಎಸ್ಸಾರ್ಟಿಸಿ ಬಸ್ ಮತ್ತು ದೇವಾಲಯಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಧರಿಸಬೇಕು’ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ.
ಬುಧವಾರ ಶಾಂತಿನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇರಳ ರಾಜ್ಯಕ್ಕೆ ಹೋಗಿ ಬರುವವವರು, ಅಯ್ಯಪ್ಪಸ್ವಾಮಿ ಭಕ್ತರು ಕೋವಿಡ್-19 ತಪಾಸಣೆ ಮಾಡಿಸಿಕೊಳ್ಳಬೇಕು. 60 ವರ್ಷ ದಾಟಿದವರು ಹಾಗೂ ಶೀತ, ಕೆಮ್ಮು, ಜ್ವರದ ಲಕ್ಷಣ ಇರುವವರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಹೇಳಿದರು.
ಕೇರಳಕ್ಕೆ ಕೆಎಸ್ಸಾರ್ಟಿಸಿ ಬಸ್‍ಗಳು ಪ್ರತಿನಿತ್ಯ ಸಂಚಾರ ಮಾಡುತ್ತಿವೆ. ಆದರೂ, ಬಸ್ ಸ್ಯಾನಿಟೈಸರ್ ಮಾಡುವ ಹಂತ ತಲುಪಿಲ್ಲ. ಹಾಗಾಗಿ ಬಸ್‍ಗಳ ಸ್ಯಾನಿಟೈಸರ್ ಮಾಡುವ ಅಗತ್ಯತೆ ಈಗಿಲ್ಲ. ಸದ್ಯ ಕೊರೊನ ಅಪಾಯವಿಲ್ಲ ಎನ್ನುವ ವರದಿ ಇದೆ. ಆದರೂ ಮುನ್ನೆಚ್ಚರಿಕೆ ಪಾಲಿಸಿದರೆ ಎಲ್ಲರಿಗೂ ಒಳ್ಳೆಯದು ಹಾಗಾಗಿ ಸಾರಿಗೆ ಮತ್ತು ಮುಜರಾಯಿ ಇಲಾಖೆಗೆ ಜನರು ಸಹಕರಿಸಿ ಮಾರ್ಗಸೂಚಿ ಪಾಲಿಸಬೇಕು ಎಂದು ಅವರು ಹೇಳಿದರು.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಇಂದು ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದ್ದು, ಪಾಲ್ಗೊಂಡಿದ್ದ ಸಚಿವ ದಿನೇಶ್ ಗುಂಡೂರಾವ್ ಜೆ.ಎನ್.1 ಬಹಳ ವೇಗವಾಗಿ ಹರಡುವ ವೈರಾಣಾಗಿದ್ದರೂ, ಇದು ಹಾನಿಕಾರಕವಾಗಿಲ್ಲ. ಮೃತಪಡುವುದು ವಿರಳ. ಯಾವುದೇ ರೀತಿಯ ಭಯ, ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆ ವಹಿಸುವುದು ಅಗತ್ಯ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.