ಕೆಎಸ್ಸಾರ್ಟಿಸಿಯ ʼಪಲ್ಲಕ್ಕಿʼ ಬಸ್ಸಿನ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ
ಬೆಂಗಳೂರು, ಅ.7: ಸಾರಿಗೆ ಇಲಾಖೆ ಅಡಿಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಯ 40 ಹವಾ ನಿಯಂತ್ರಣ ರಹಿತ(ನಾನ್ ಎಸಿ) ಸ್ಪೀಪರ್ ವಾಹನಗಳಾದ ಐಷಾರಾಮಿ ‘ಪಲ್ಲಕ್ಕಿ’ ಹಾಗೂ 100 ಸಾಮಾನ್ಯ ಸಾರಿಗೆ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಶನಿವಾರ ಇಲ್ಲಿನ ವಿಧಾನಸೌಧದ ಆವರಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ವಾಹನಗಳು ಹಾಗೂ ವಿಶೇಷ ‘ಪಲ್ಲಕ್ಕಿ’ ಬಸ್‍ನೊಳಗೆ ಹೋಗಿ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ ಅವರು ಅನಂತರ ನೂತನ ಸಾರಿಗೆ ಬಸ್‍ಗಳಿಗೆ ಹಸಿರು ನಿಶಾನೆ ತೋರಿದರು.
ಈಗ ಬಿಡುಗಡೆಯಾಗಿರುವ ನಲವತ್ತು ಪಲ್ಲಕ್ಕಿ ಬಸ್‌ಗಳಲ್ಲಿ ಮೂವತ್ತು ಬಸ್‌ಗಳು ಕರ್ನಾಟಕದಲ್ಲಿಯೇ ಸಂಚಾರ ನಡೆಸಲಿವೆ. ಉಳಿದ ಹತ್ತು ಬಸ್‌ಗಳು ಬೇರೆ ರಾಜ್ಯಗಳಿಗೆ ತೆರಳಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಗಳೂರು, ಉಡುಪಿ, ಪುತ್ತೂರು, ಶಿವಮೊಗ್ಗ, ಕಾರವಾರ, ಬೆಳಗಾವಿ, ಹುಬ್ಬಳ್ಳಿ, ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಸಹಿತ ರಾಜ್ಯದ ಬೇರೆ ಬೇರೆ ಊರುಗಳಿಗೆ ಸಂಚರಿಸಲಿವೆ. ಜೊತೆಗೆ ಹೊರರಾಜ್ಯಗಳ ಪಾಂಡಿಚೇರಿ, ಚೆನ್ನೈ, ಕೊಯಮತ್ತೂರು, ಮಂತ್ರಾಲಯ, ಕುಂಭಕೋಣಕ್ಕೆ ಪ್ರಯಾಣಿಸುವವರಿಗೂ ‘ಪಲ್ಲಕ್ಕಿ’ ಬಸ್ ಸೌಲಭ್ಯ ಸಿಗಲಿದೆ.
ಪಲ್ಲಕ್ಕಿ ಬಸ್ಸಿನ ವಿಶೇಷತೆ..!
-11.3 ಮೀಟರ್ ಉದ್ದದ ನಾನ್ ಎಸಿ ಬಸ್
-ಬಿಎಸ್-6 ತಂತ್ರಜ್ಞಾನದ ಮಾದರಿಯ ಎಚ್‍ಪಿ ಇಂಜಿನ್
-ಹೈಟೆಕ್ ವಿನ್ಯಾಸದ 30 ಸ್ಲೀಪರ್ ಬರ್ತ್ ಸೀಟ್‍ಗಳು
-ಪ್ರತಿ ಸೀಟಿಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್‍ಗಳ ಚಾರ್ಜಿಂಗ್ ಹಾಗೂ ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ
-ಸೀಟ್ ನಂಬರ್ ಮೇಲೆ ಎಲ್‍ಇಡಿ ಅಳವಡಿಕೆ
-ಓದಲು ಬೆಳಕಿನ ಎಲ್‍ಇಡಿ ಲೈಟ್ ಅಳವಡಿಕೆ
-ಬಸ್‍ನಲ್ಲಿ ಅಡಿಯೊ ಸ್ವೀಕರ್ ಗಳ ಮೂಲಕ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆ
-ಡಿಜಿಟಲ್ ಗಡಿಯಾರ, ಹಾಗೆ ಎಲ್‍ಇಡಿ ಫ್ಲೋರ್
-ಪ್ರತಿ ಪ್ರಯಾಣಿಕರಿಗೆ ಚಪ್ಪಳಿ ಇಡಲು ಸ್ಥಳಾವಕಾಶದ ವ್ಯವಸ್ಥೆ
-ಪ್ರಯಾಣಿಕರಿಗೆ ತಲೆದಿಂಬಿನ ವ್ಯವಸ್ಥೆ
-ಚಾಲಕರಿಗೆ ಸಹಾಯವಾಗಲೂ ಬಸ್ ಹಿಂಭಾಗದಲ್ಲಿ ಹೈಟೆಕ್ ಕ್ಯಾಮರಾ ಅಳವಡಿಕೆ
-40 ಬಸ್‍ಗಳ ಪೈಕಿ 30 ಬಸ್‍ಗಳು ರಾಜ್ಯದೊಳಗೆ ಸಂಚರಿಸಲಿವೆ
-ಉಳಿದ 10 ಬಸ್‍ಗಳು ಬೆಂಗಳೂರಿನಿಂದ ಹೊರರಾಜ್ಯಗಳಿಗೆ ಸಂಚರಿಸಲಿವೆ.
-ಈ ಬಸ್ ಸೇವೆಯು ಇಂದಿನಿಂದಲೇ ಆರಂಭ