ಬಿಜೆಪಿ ಜೊತೆ ಮೈತ್ರಿ ವಿಚಾರ: ಜೆಡಿಎಸ್ ನಾಯಕ ವೈ ಎಸ್ ವಿ ದತ್ತಾ ಹೇಳಿದ್ದೇನು?
ಶಿವಮೊಗ್ಗ: ʼʼಇಂದು ಯಾವ ರಾಜಕೀಯ ಪಕ್ಷಗಳಿಗೂ ಸಿದ್ಧಾಂತಗಳು ಉಳಿದುಕೊಂಡಿಲ್ಲ. ಅವಕಾಶವಾದಿ ರಾಜಕಾರಣವೇ ಈ ಹೊತ್ತಿನ ವಿಜೃಂಭಣೆಯಾಗಿದೆ. ಇದು ಎಲ್ಲಾ ಪಕ್ಷಗಳಿಗೂ ಅನ್ವಯಿಸುತ್ತದೆʼʼ ಎಂದು ಜೆಡಿಎಸ್ ನಾಯಕ ವೈ ಎಸ್ ವಿ ದತ್ತಾ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼʼಆರೆಸ್ಸೆಸ್, ಹಿಂದೂ ಮುಂತಾದ ಅಜೆಂಡಾಗಳನ್ನು ಇಟ್ಟುಕೊಂಡಿದ್ದ ಬಿಜೆಪಿಯವರು ಕಾಂಗ್ರೆಸ್ ಸೇರಿದಾಗ ಅವರ ಸಿದ್ಧಾಂತಗಳು ಎಲ್ಲಿ ಹೋಗುತ್ತವೆ. ಹಾಗೆಯೇ ಕಾಂಗ್ರೆಸ್ ಪಕ್ಷದವರು ಬಿಜೆಪಿ ಸೇರಿದಾಗ ಅವರ ನಿಷ್ಠೆಗಳು, ತತ್ವಗಳು ಎಲ್ಲಿ ಮರೆಯಾಗುತ್ತವೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದೆʼʼ ಎಂದರು.
ʼʼಮೈತ್ರಿ ಧರ್ಮ ಇಂದು ಅನಿವಾರ್ಯʼʼ
ʼʼಹಾಗಾಗಿ ಮೈತ್ರಿ ಧರ್ಮ ಎನ್ನುವುದು ಇಂದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಹೊರಟಿದೆ. ಅದರೆ ನಮ್ಮ ಪಕ್ಷದ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿಯವರು ದೆಹಲಿಯ ಬಿಜೆಪಿ ನಾಯಕರ ಜೊತೆ ಮಾತನಾಡಿದ ನಂತರವೇ ಅದರ ತೀರ್ಮಾನ ಆಗಲಿದೆ. ಆದರೆ ಮಾತುಕತೆ ಆಗಿರುವುದಂತೂ ನಿಜ. ಸೀಟು ಹಂಚಿಕೆ ವಿಷಯದ ಬಗ್ಗೆ ನಮ್ಮ ಪಕ್ಷದ ಮುಖಂಡರು ಮಾತನಾಡುತ್ತಾರೆʼʼ ಎಂದರು.