ಬ್ರ್ಯಾಂಡ್ ಬೆಂಗಳೂರಿಗೆ 45 ಸಾವಿರ ಕೋಟಿ...: ಬಜೆಟ್ನಲ್ಲಿ ಸಿಲಿಕಾನ್ ಸಿಟಿಗೆ ಸಿಕ್ಕಿದ್ದೇನು?
ಬೆಂಗಳೂರು, ಜು.7: ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯು ಬೆಂಗಳೂರು ನಗರದ ನಿವಾಸಿಗಳ ಸುರಕ್ಷತೆ ಹಾಗೂ ಅನುಕೂಲವನ್ನು ಕೇಂದ್ರಬಿಂದುವಾಗಿಸಿದೆ. ಈ ಪರಿಕಲ್ಪನೆಯು ನಗರದ ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಸಾರ್ವಜನಿಕರ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ, ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆ ಸೇರಿ ಒಟ್ಟು ಒಂಬತ್ತು ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ನಮ್ಮ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಯವ್ಯಯದಲ್ಲಿ ಘೋಷಿಸಿದ್ದಾರೆ.
-ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮೇಲ್ದರ್ಜೆಗೇರಿಸಲು 1,411 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸ್ವಂತ ಸಂಪನ್ಮೂಲದಿಂದ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದ್ದು, ಮಾರ್ಚ್ 2026 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ.
-ನೈಋತ್ಯ ರೈಲ್ವೇ ಇಲಾಖೆಯವರು ಬೈಯ್ಯಪ್ಪನಹಳ್ಳಿ ಪ್ರದೇಶದಲ್ಲಿ ನಿರ್ಮಿಸಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಅನ್ನು ತಲುಪಲು ಸರಿಯಾದ ಮೆಟ್ರೋ ಮತ್ತು ರಸ್ತೆಗಳ ಸಂಪರ್ಕ ಇಲ್ಲದೇ ಇರುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನಾನುಕೂಲ ಹಾಗೂ ಸಂಚಾರ ದಟ್ಟಣೆ ಸಮಸ್ಯೆಯ ನಿವಾರಣೆಗಾಗಿ 263 ಕೋಟಿ ರೂ.ಗಳ ವೆಚ್ಚದಲ್ಲಿ ಒಂದು ಹೊಸ ಮೇಲ್ಸೇತುವೆ ನಿರ್ಮಾಣ.
-ವೈಟ್ ಟಾಪಿಂಗ್ ಯೋಜನೆಯನ್ನು ಪುನರಾರಂಭಿಸಿ 2023-24ನೇ ಸಾಲಿನಲ್ಲಿ 800 ಕೋಟಿ ರೂ. ವೆಚ್ಚದಲ್ಲಿ 100 ಕಿ.ಮೀ. ಉದ್ದದ ಮುಖ್ಯ ರಸ್ತೆಗಳನ್ನು ವೈಟ್ ಟಾಪ್ ರಸ್ತೆಗಳಾಗಿ ಅಭಿವೃದ್ಧಿ.
-2023-24ನೆ ಸಾಲಿನಲ್ಲಿ 83 ಕಿ.ಮೀ. ಉದ್ದದ ರಸ್ತೆಗಳನ್ನು ಹೈ ಡೆನ್ಸಿಟಿ ಕಾರಿಡಾರ್‍ಗಳೆಂದು 273 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
-ಬೆಂಗಳೂರು ನಗರದ 97 ಲಕ್ಷ ಟನ್‍ನಷ್ಟು ಹಳೆ ತ್ಯಾಜ್ಯವನ್ನು ಜೈವಿಕ ಗಣಿಗಾರಿಕೆ ಮತ್ತು ಜೈವಿಕ ಪರಿಹಾರದ ಮೂಲಕ ಸಂಸ್ಕರಿಸಲಾಗುವುದು ಮತ್ತು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಇಂತಹ 256 ಎಕರೆ ಭೂಮಿಯನ್ನು ಉದ್ಯಾನವನಗಳಾಗಿ ಪರಿವರ್ತನೆ ಮಾಡಲಾಗುವುದು.
-2024ರ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರದವರೆಗೆ, ಕೆಂಗೇರಿಯಿಂದ ಚಲ್ಲಘಟ್ಟದವರೆಗೆ, ನಾಗಸಂದ್ರದಿಂದ ಮಾದಾವರದವರೆಗೆ, ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಒಟ್ಟು 27 ಕಿ.ಮೀ.ಗಳ ನೂತನ ಮಾರ್ಗಗಳನ್ನು ಪ್ರಾರಂಭಿಸಲಾಗುವುದು.
-ಮುಂದಿನ ಮೂರು ವರ್ಷಗಳಲ್ಲಿ ಈಗಿರುವ 70 ಕಿ.ಮೀ.ನ ಸಂಪರ್ಕಜಾಲವನ್ನು 176 ಕಿ.ಮೀ.ಗೆ ವಿಸ್ತರಿಸುವ ಮೂಲಕ ಮೆಟ್ರೊ ಕಾರ್ಯಾಚರಣೆಯ ಸಂಪರ್ಕ ಜಾಲವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗುವುದು. ಪ್ರಗತಿಯಲ್ಲಿರುವ ಏರ್ಪೊರ್ಟ್ ಲೈನ್ ಕಾಮಗಾರಿಯನ್ನು ಪೂರ್ಣಗೊಳಿಸಿ 2026 ರಲ್ಲಿ ಕಾರ್ಯಾರಂಭ ಮಾಡಲಾಗುವುದು.
-ಪಾರಂಪರಿಕ ಮತ್ತು ದ್ರವ ತ್ಯಾಜ್ಯದ ಸಮರ್ಪಕ ನಿರ್ವಹಣೆ ಹಾಗೂ ಒಳಚರಂಡಿ ನೀರು ಸಂಸ್ಕರಿಸುವ ಆಧುನಿಕ ಪದ್ಧತಿಗಳನ್ನು ಅಳವಡಿಸುವ ಮೂಲಕ ನದಿಗಳು ಮತ್ತು ಕೆರೆಗಳಿಗೆ ಹರಿಯುವ ಮಾಲಿನ್ಯ ನಿಯಂತ್ರಿಸಲು 1,250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ಮತ್ತು ಇತರೇ ಪಟ್ಟಣಗಳಲ್ಲಿ 2,150 ಕೋಟಿ ರೂ. ವೆಚ್ಚದಲ್ಲಿ ಒಟ್ಟಾರೆ 3,400 ಕೋಟಿ ರೂ.ಗಳ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
-ಇಂದಿರಾ ಕ್ಯಾಂಟೀನ್‍ಗೆ 100 ಕೋಟಿ..!: ಪ್ರಸಕ್ತ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್‍ಗಳ ದುರಸ್ತಿ, ನವೀಕರಣ ಹಾಗೂ ನಿರ್ವಹಣೆಗೆ ರಾಜ್ಯ ಸರಕಾರ100 ಕೋಟಿ ರೂ. ಒದಗಿಸಲಾಗುವುದೆಂದು ಪ್ರಕಟಿಸಿದೆ.
ನಮ್ಮ ಸರಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಯೋಜನೆಯು ನಗರ ಪ್ರದೇಶಗಳಲ್ಲಿ ಬಡವರು ಹಾಗೂ ಶ್ರಮಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ, ಉಪಾಹಾರ ಒದಗಿಸುವ ಮೂಲಕ ಅವರ ನೆಮ್ಮದಿಗೆ ಕಾರಣವಾಗಿತ್ತು. ಆದರೆ ಹಿಂದಿನ ಬಿಜೆಪಿ ಸರಕಾರ ವಿವಿಧ ನೆಪಗಳೊಡ್ಡಿ, ಈ ಯೋಜನೆಯನ್ನು ಸ್ಥಗಿತಗೊಳಿಸಿ, ಬಡವರ ವಿರೋಧಿ ಕ್ರಮವನ್ನು ಅನುಸರಿಸಿತು.
ಇದೀಗ ಮೊದಲನೇ ಹಂತದಲ್ಲಿ ಹೊಸ ಮೆನುವಿನೊಂದಿಗೆ, ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಬಿಬಿಎಂಪಿ ಹಾಗೂ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪುನರಾರಂಭ ಮಾಡಲಾಗುವುದು. ಎರಡನೆ ಹಂತದಲ್ಲಿ ಎಲ್ಲಾ ಹೊಸ ಪಟ್ಟಣಗಳಲ್ಲಿ ಮತ್ತು ಬಿಬಿಎಂಪಿಯ ಹೊಸ ವಾರ್ಡ್‍ಗಳಲ್ಲಿ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
*ತ್ಯಾಜ್ಯ ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಹೆಚ್ಚು ವೈಜ್ಞಾನಿಕವಾಗಿ ಮತ್ತು ಸುಸ್ಥಿರ ರೀತಿಯಲ್ಲಿ ವಿಲೇವಾರಿ ಮಾಡಲು ಬೆಂಗಳೂರು ಘನತಾಜ್ಯ ನಿರ್ವಹಣಾ ಸಂಸ್ಥೆಯ ಪರಿಣಾಮಕಾರಿ ಕಾರ್ಯಾಚರಣೆಗಾಗಿ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು.