42 ಕೋಟಿ ರೂ.ಬಗ್ಗೆ ಯಾವ ತನಿಖೆ ಮಾಡಿಸುತ್ತೀರಿ?; ಸಿಎಂಗೆ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ
ಬೆಂಗಳೂರು, ಅ. 13: ‘ಪಂಚರಾಜ್ಯ ಚುನಾವಣೆ ಘೋಷಣೆ ಆಗಿದ್ದೇ ತಡ, ರಾಜ್ಯದಲ್ಲಿ ಕುರುಡು ಕಾಂಚಾಣ ಕಂತೆ ಕಂತೆಯಾಗಿ ಕಾಟನ್ ಬಾಕ್ಸ್ ಗಳಲ್ಲಿ ಕುಣಿಯುತ್ತಿದೆ! ಅದೂ ಮಂಚದ ಕೆಳಗೆ. ಐಟಿ ದಾಳಿ ವೇಳೆ ಗುತ್ತಿಗೆದಾರನ ಮನೆಯಲ್ಲಿ ಪತ್ತೆಯಾದ ಹಣ ಯಾರದ್ದು? ಯಾರ ಹೆಣದ ಮೇಲೆ ಸಂಗ್ರಹಿಸಿದ ಪಾಪದ ಹಣವಿದು? ಈ ಪ್ರಶ್ನೆಗಳಿಗೆ ಉತ್ತರ ಬೇಕಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆಗ್ರಹಿಸಿದ್ದಾರೆ.
ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಆಯ್ದ ಗುತ್ತಿಗೆದಾರರಿಗೆ ಬಿಬಿಎಂಪಿಯಿಂದ 650 ಕೋಟಿ ರೂ. ಬಿಡುಗಡೆಯಾದ ಬೆನ್ನಲ್ಲೇ ಈ 42ಕೋಟಿ ರೂ. ಐಟಿ ಅಧಿಕಾರಿಗಳಿಗೆ ಸಿಕ್ಕಿಬೀಳುತ್ತದೆ. ಅಲ್ಲಿಗೆ ಕಲೆಕ್ಷನ್ ನಿಜ ಎಂದಾಯಿತು. ಅದು ಎಷ್ಟು ಪಸರ್ಂಟೇಜ್? ಅದರ ಹಿಂದೆ ಅಡಗಿ ಕೂತಿರುವ ಆದಿಪುರುಷರು ಯಾರು?’ ಎಂದು ಪ್ರಶ್ನಿಸಿದ್ದಾರೆ.
‘23 ಬಾಕ್ಸ್‍ಗಳಲ್ಲಿ ತುಂಬಿಡಲಾಗಿದ್ದ ಈ ಇಡಗಂಟು ಪಕ್ಕದ ತೆಲಂಗಾಣಕ್ಕೆ ಹೊರಟು ನಿಂತಿತ್ತು ಎನ್ನುವುದು ಮಾಹಿತಿ. ಅಲ್ಲಿಗೆ ಚುನಾವಣೆಗಾಗಿ ಈ ಹಣವನ್ನು ಸಂಗ್ರಹ ಮಾಡಲಾಗಿತ್ತು ಎನ್ನುವುದು ಸತ್ಯ. ಈ ಕನಕ ಮಹಾಲಕ್ಷ್ಮಿಯ ಕಲೆಕ್ಷನ್‍ಗೆ ‘ಬೆಂಗಳೂರು ನಗದು ಅಭಿವೃದ್ಧಿ ಇಲಾಖೆ'ಯ ಕೈ ಕರಾಮತ್ತು ಎಂದು ಇನ್ನೊಂದು ಮಾಹಿತಿ. ಅಷ್ಟರಲ್ಲಿ ಐಟಿ ಇಲಾಖೆ ಮುಗಿಬಿದ್ದ ಪರಿಣಾಮ, ಗುಟ್ಟು ರಟ್ಟಾಗಿದೆ. ಅಲ್ಲಿಗೆ ಕಾಂಗ್ರೆಸ್ ಸರಕಾರದಲ್ಲಿ ಪಸರ್ಂಟೇಜ್ ಪಾರಮ್ಯ ಅವ್ಯಾಹತ ಎಂದಾಯಿತು?’ ಎಂದು ಆಕ್ಷೇಪಿಸಿದ್ದಾರೆ.
‘ಈಗ ಹೇಳಿ ಸಿದ್ದರಾಮಯ್ಯನವರೇ.. 42 ಕೋಟಿ ರೂ. ಬಗ್ಗೆ ಯಾವ ತನಿಖೆ ಮಾಡಿಸುತ್ತೀರಿ? ಸಿಬಿಐ, ಈಡಿ, ಹಾಲಿ ನ್ಯಾಯಾಧೀಶರು, ನಿವೃತ್ತ ನ್ಯಾಯಾಧೀಶರು..? ದಯಮಾಡಿ ಹೇಳಿ. ರೈತರು ಬರ, ವಿದ್ಯುತ್ ಬಿಕ್ಕಟ್ಟಿನಿಂದ ಕಂಗೆಟ್ಟಿದ್ದಾರೆ. ಗುತ್ತಿಗೆದಾರರು ಅಯೋಮಯ ಸ್ಥಿತಿಯಲ್ಲಿದ್ದಾರೆ. ಆದರೂ ಕಲೆಕ್ಷನ್ ‘ಕೈ' ಚಳಕ ಜೋರಾಗಿದೆ. ಪಂಚರಾಜ್ಯಗಳ ಪಾಲಿಗೆ ಕರ್ನಾಟಕ ಸಮೃದ್ಧ ಎಟಿಎಮ್!! ಕಾವೇರಿ ನೀರು ತಮಿಳುನಾಡಿಗೆ ನಿರಂತರ ಹರಿಯುತ್ತಿದ್ದರೆ, ಕನ್ನಡಿಗರ ತೆರಿಗೆ ಲಕ್ಷ್ಮಿ ಎಲೆಕ್ಷನ್ ರಾಜ್ಯಗಳ ಪಾಲಾಗುತ್ತಿದ್ದಾಳೆ’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಆದಿಯಿಂದಲೂ ಇದೇ ಕಥೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೈಕಮಾಂಡ್‍ಗೆ ಹಬ್ಬ. ಈಗಲೂ ಅದೇ ಆಗುತ್ತಿದೆ. ಪಂಚರಾಜ್ಯಗಳ ಚುನಾವಣೆಗಾಗಿ ಕರ್ನಾಟಕಕ್ಕೆ ಕನ್ನ ಹೊಡೆಯಲಾಗಿದೆ. ವೋಟು ಕೊಟ್ಟ ತಪ್ಪಿಗೆ ಕಾಂಗ್ರೆಸ್ ಉಂಡು ಹೋಗುತ್ತಿದೆ, ಕೊಂಡು ಹೋಗುತ್ತಿದೆ. ಇದು ಕನ್ನಡಿಗರ ಕರ್ಮ’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.