ವಿಪಕ್ಷ ನಾಯಕರನ್ನೇ ಗುರಿಯಾಗಿಸಿ ತನಿಖಾ ಸಂಸ್ಥೆಗಳ ದಾಳಿಯ ಮರ್ಮವೇನು?: ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು: ವಿಪಕ್ಷ ನಾಯಕರನ್ನೆ ಗುರಿಯಾಗಿಸಿಕೊಂಡು ಕೇಂದ್ರೀಯ ತನಿಖಾ ಸಂಸ್ಥೆಗಳು ದಾಳಿ ನಡೆಸುವ ಮರ್ಮವೇನು? ಈ ತನಿಖಾ ಸಂಸ್ಥೆಗಳ ಪ್ರಕಾರ ಬಿಜೆಪಿಯಲ್ಲಿರುವವರೆಲ್ಲರೂ ಪರಮ ಪ್ರಾಮಾಣಿಕರೇ? ಅವರು ಯಾರು ಭ್ರಷ್ಟಾಚಾರ ಮಾಡೇ ಇಲ್ಲವೇ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಬಿಜೆಪಿಯವರ ವಿರುದ್ಧ ಸಾಲು ಸಾಲು ಭ್ರಷ್ಟಾಚಾರದ ಆರೋಪವಿದ್ದರೂ ಕೇಂದ್ರೀಯ ತನಿಖಾ ಸಂಸ್ಥೆಗಳ್ಯಾಕೆ ಅವರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಿಸುವುದಿಲ್ಲ? ಭ್ರಷ್ಟ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸದಿರಲು ನರೇಂದ್ರ ಮೋದಿಯವರ ಪ್ರಭಾವ ಇಲ್ಲದೆ ಬೇರೇನು ಕಾರಣವಿದೆ? ಎಂದು ಕೇಳಿದ್ದಾರೆ.
ಸ್ವತಂತ್ರ ಭಾರತದಲ್ಲಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಗರಿಷ್ಟ ಮಟ್ಟದಲ್ಲಿ ದುರಪಯೋಗಪಡಿಸಿಕೊಂಡ ಯಾವುದಾದರೂ ಸರಕಾರವಿದ್ದರೆ ಅದು ಮೋದಿ ಸರಕಾರ ಮಾತ್ರ. ಮೋದಿಯವರ ಆಡಳಿತದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ದಾಖಲಿಸಿರುವ ಪ್ರಕರಣಗಳಲ್ಲಿ ಶೇ.95ರಷ್ಟು ಪ್ರಕರಣಗಳು ವಿಪಕ್ಷ ನಾಯಕರ ವಿರುದ್ಧ ಎಂದು ಅವರು ಹೇಳಿದ್ದಾರೆ.
ಈ ಅಂಕಿ-ಅಂಶವೆ ತನಿಖಾ ಸಂಸ್ಥೆಗಳ ದುರ್ಬಳಕೆಯ ಸತ್ಯ ದರ್ಶನ ತೋರಿಸುತ್ತವೆ. ಮೋದಿಯವರಿಗೆ ಹಾಗೂ ಅವರ ಸರಕಾರಕ್ಕೆ ವಿರೋಧ ಪಕ್ಷಗಳನ್ನು ರಾಜಕೀಯವಾಗಿ ಎದುರಿಸುವ ಎದೆಗಾರಿಕೆ ಇಲ್ಲ. ಹೀಗಾಗಿ, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿಪಕ್ಷದವರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
1ವಿಪಕ್ಷ ನಾಯಕರನ್ನೇ ಗುರಿಯಾಗಿಸಿಕೊಂಡು ಕೇಂದ್ರೀಯ ತನಿಖಾ ಸಂಸ್ಥೆಗಳು ದಾಳಿ ನಡೆಸುವ ಮರ್ಮವೇನು?ಈ ತನಿಖಾ ಸಂಸ್ಥೆಗಳ ಪ್ರಕಾರ @BJP4India ಯಲ್ಲಿರುವವರೆಲ್ಲರೂ ಪರಮ ಪ್ರಾಮಾಣಿಕರೆ?ಅವರ‌್ಯಾರು ಭ್ರಷ್ಟಾಚಾರ ಮಾಡೇ ಇಲ್ಲವೇ?BJPಯವರ ವಿರುದ್ಧ ಸಾಲು ಸಾಲು ಭ್ರಷ್ಟಾಚಾರದ ಆರೋಪವಿದ್ದರೂ ಕೇಂದ್ರೀಯ ತನಿಖಾ ಸಂಸ್ಥೆಗಳ್ಯಾಕೆ ಅವರ ವಿರುದ್ಧ… pic.twitter.com/AI0r74x4zP
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 25, 2024