ಜನರ ಸಮಸ್ಯೆ ಬಗ್ಗೆ ಸದನದಲ್ಲಿ ಚರ್ಚಿಸದೆ ಬಿಜೆಪಿ ಹೊರಗೆ ಹೋರಾಟ ಮಾಡಿದರೇನು ಪ್ರಯೋಜನ: ಡಿಕೆಶಿ ಪ್ರಶ್ನೆ
ಬೆಳಗಾವಿ, ಡಿ.13: 'ರಾಜ್ಯದ ಜನ 65 ಬಿಜೆಪಿ ಶಾಸಕರನ್ನು ಆಯ್ಕೆ ಮಾಡಿರುವುದು ವಿಧಾನಸಭೆಯಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲೆಂದು. ಆದರೆ ಇವರು ಸದನದಲ್ಲಿ ಚರ್ಚೆ ಮಾಡದೇ ಹೊರಗೆ ಹೋರಾಟ ಮಾಡಿದರೆ ಏನು ಪ್ರಯೋಜನ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯವರ ನಡವಳಿಕೆಯಿಂದ ಅವರ ಪಕ್ಷದಲ್ಲಿ ಒಮ್ಮತವಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಸರಕಾರ ಕೋಟ್ಯಂತರ ರೂ. ಖರ್ಚು ಮಾಡಿ ಸುವರ್ಣಸೌಧ ಕಟ್ಟಿಸಿರುವುದು ಉತ್ತರ ಕರ್ನಾಟಕದ ಸಮಸ್ಯೆಗಳು, ಬರ ಪರಿಸ್ಥಿತಿ ಹಾಗೂ ಸರಕಾರದ ವೈಫಲ್ಯಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಬೇಕು ಎಂದು. ಅವರ ಆಚಾರ, ವಿಚಾರ, ಜನಪರ ಧ್ವನಿಯನ್ನು ಸದನದಲ್ಲಿ ವ್ಯಕ್ತಪಡಿಸಬೇಕು. ಅದನ್ನು ಬಿಟ್ಟು ಹೊರಗೆ ಹೊರಾಟ ಮಾಡುತ್ತೇನೆ ಎಂದರೆ ಯಾರು ಕೇಳುತ್ತಾರೆ? ಅದರಿಂದ ಏನು ಪ್ರಯೋಜನ?
ಯಡಿಯೂರಪ್ಪ ಸಹ ಯಾವುದಾದರೂ ಕ್ಷೇತ್ರ ಆಯ್ಕೆಮಾಡಿಕೊಂಡು, ಸದನಕ್ಕೆ ಬಂದು ಮಾತನಾಡಲಿ. ನಮಗೆ ಯಾವುದೇ ಅಭ್ಯಂತರವಿಲ್ಲ. ಬಿಜೆಪಿಯಲ್ಲಿ ಸಮನ್ವಯತೆ ಕೊರತೆ, ಆ ಪಕ್ಷದ ದೌರ್ಬಲ್ಯ ಮತ್ತು ವೈಫಲ್ಯ ಎದ್ದು ಕಾಣುತ್ತಿದೆ ಡಿಕೆಶಿ ಹೇಳಿದರು.
ರಮೇಶ್ ಜಾರಕಿಹೊಳಿ ಅವರ ಪ್ರಕರಣದ ಬಗ್ಗೆ ಮತ್ತೆ ತನಿಖೆ ನಡೆಸಲು ಸರಕಾರ ತಯಾರಿ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ನನಗದು ಗೊತ್ತಿಲ್ಲ ಎಂದರು.