ಗುಜರಾತ್ನಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಜೋಶಿ ಆಗ್ರಹಿಸುವುದು ಯಾವಾಗ? : ಕಾಂಗ್ರೆಸ್
Photo: fb/prahladjohi
ಬೆಂಗಳೂರು : ‘ಕರ್ನಾಟಕ ರಾಜ್ಯದಲ್ಲಿ ಮಾದಕ ವಸ್ತುಗಳ (ಡ್ರಗ್ಸ್) ನಿಯಂತ್ರಿಸಲು ನಮ್ಮ ಸರಕಾರ ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡಿದೆ. ಆದರೆ, ದೇಶಕ್ಕೆ ನುಗ್ಗುವ ಗುಜರಾತಿನಲ್ಲಿ ನಿಯಂತ್ರಣ ಮಾಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಆಗ್ರಹಿಸುವುದು ಯಾವಾಗ?’ ಎಂದು ಕಾಂಗ್ರೆಸ್ ಇಂದಿಲ್ಲಿ ಖಾರವಾಗಿ ಪ್ರಶ್ನಿಸಿದೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಕರ್ನಾಟಕದ ಹೆಸರು ಕೆಡಿಸುವಲ್ಲಿ ಇರುವ ಜೋಶಿಯವರ ಜೋಶ್ ಗುಜರಾತ್ ಬಗ್ಗೆ ಮಾತನಾಡಲು ಇಲ್ಲವೇಕೆ?, ದೇಶದಲ್ಲಿ ಡ್ರಗ್ಸ್ ಒಳ ನುಸುಳಲು ಗುಜರಾತ್ ಹೆಬ್ಬಾಗಿಲು. ಗುಜರಾತಿನಲ್ಲಿ ಡ್ರಗ್ಸ್ ಒಳಬರುವುದನ್ನು ತಡೆದರೆ ಇಡೀ ದೇಶದಲ್ಲಿ ನಿಯಂತ್ರಿಸಬಹುದು’ ಎಂದು ಹೇಳಿದೆ.
‘ದೇಶದಲ್ಲಿ ಡ್ರಗ್ಸ್ ವಶಪಡಿಸಿಕೊಂದಿದ್ದರಲ್ಲಿ ಗುಜರಾತಿನಲ್ಲೇ ಅತಿ ಹೆಚ್ಚು, ಶೇ.30ರಷ್ಟು ಡ್ರಗ್ಸ್ ಗುಜರಾತಿನಲ್ಲೇ ಸಿಕ್ಕಿದೆ. ಗುಜರಾತಿನಲ್ಲಿರುವ ಅದಾನಿ ಬಂದರಿನಲ್ಲಿ ವಿಶ್ವದಾಖಲೆಯ 21ಸಾವಿರ ಕೋಟಿ ರೂ.ಮೌಲ್ಯದ ಡ್ರಗ್ಸ್ ದೊರಕಿತ್ತು, ಮತ್ತೊಮ್ಮೆ 9ಸಾವಿರ ಕೋಟಿ ರೂ.ಮೌಲ್ಯದ ಡ್ರಗ್ಸ್ ದೊರಕಿತ್ತು. 3 ದಶಕಗಳಿಂದ ಬಿಜೆಪಿ ಆಳ್ವಿಕೆ ಇದ್ದರೂ ಗುಜರಾತ್ ಮಾದಕವಸ್ತುಗಳ ತವರು ಆಗ್ಗಿದ್ದೇಕೆ, ನಿಯಂತ್ರಣಕ್ಕೆ ತರದಿರುವುದೇಕೆ?’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.