ನರೇಂದ್ರ ಮೋದಿ ಅವರ ಆಡಳಿತದಲ್ಲಿ ಮಾಡಿರುವ ಸಾಲದ ಹಣ ಎಲ್ಲಿ ಸೋರಿಹೋಗುತ್ತಿದೆ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ
"ಅಶೋಕನ ಅನರ್ಥಶಾಸ್ತ್ರದಲ್ಲಿ ಪ್ರಧಾನಿ ಮೋದಿಯವರು ಮಾಡಿದ ಸಾಲದ ಲೆಕ್ಕವಿಲ್ಲವೇ?"
ಬೆಂಗಳೂರು: ರಾಜ್ಯ ಸರ್ಕಾರದ ಸಾಲದ ಲೆಕ್ಕ ಹೇಳಿದ್ದೀರಿ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ನಿಮ್ಮದೇ ಪಕ್ಷದ ಸರ್ಕಾರದ ಸಾಲದ ಕತೆಯನ್ನು ಸ್ವಲ್ಪ ಹೇಳಿ ಬಿಡಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಮ್ಮ ಎರಡನೇ ಅವಧಿಯಲ್ಲೂ ಸಿಎಂ ಸಿದ್ದರಾಮಯ್ಯ ನವರು ಕರ್ನಾಟಕವನ್ನ ದೊಡ್ಡ ಸಾಲದ ಸುಳಿಯಲ್ಲಿ ಸಿಲುಕಿಸಲು ಹೊರಟಿದ್ದಾರೆ ಎಂದು ಆರ್.ಅಶೋಕ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, "ಸನ್ಮಾನ್ಯ ಆರ್ ಅಶೋಕ್ ಅವರೇ, ಯಾಕೆ ನಮ್ಮ ಕೈಯಲ್ಲಿ ಬಡಿಗೆ ಕೊಟ್ಟು ಬಡಿಸಿಕೊಳ್ಳುತ್ತೀರಿ? ರಾಜ್ಯ ಸರ್ಕಾರದ ಸಾಲದ ಲೆಕ್ಕ ಹೇಳಿದ್ದೀರಿ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ನಿಮ್ಮದೇ ಪಕ್ಷದ ಸರ್ಕಾರದ ಸಾಲದ ಕತೆಯನ್ನು ಸ್ವಲ್ಪ ಹೇಳಿ ಬಿಡಿ. ನೀವು ಮರೆತಿದ್ದರೆ ನಾನು ಹೇಳುತ್ತೇನೆ ಕೇಳಿ. 2014ರಲ್ಲಿ ಕೇವಲ ರೂ.55 ಲಕ್ಷ ಕೋಟಿಯಷ್ಟು ಇದ್ದ ಭಾರತದ ಸಾಲ ಈ ಹಣಕಾಸಿನ ವರ್ಷದಲ್ಲಿ ರೂ.183.67 ಲಕ್ಷ ಕೋಟಿಗೆ ತಲುಪಿದೆ. ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಸಾಲ ರೂ.123 ಲಕ್ಷ ಕೋಟಿ. ಅಂದರೆ ಪ್ರತಿಯೊಬ್ಬ ಭಾರತೀಯನ ತಲೆಮೇಲೆ 92 ಸಾವಿರ ರೂಪಾಯಿಗಳ ಸಾಲದ ಹೊರೆ ಇದೆ. "ಸಬ್ ಕಾ ಸಾಥ್ ಸಬ್ ಕೋ ಸಾಲ". ಎಂದು ತಿರುಗೇಟು ನೀಡಿದ್ದಾರೆ.
ಅಶೋಕ್ ಅವರೇ, ನಿಮಗೆ ಈ ಆರ್ಥಿಕ ವ್ಯವಹಾರಗಳು ಅರ್ಥವಾಗುವುದಿದ್ದರೆ ಸ್ವಲ್ಪ ಕೇಳಿಸಿಕೊಳ್ಳಿ. ನಮ್ಮ ರಾಜ್ಯ ಸರ್ಕಾರದ ಸಾಲ ‘’ಹಣಕಾಸು ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ (ಎಫ್ ಆರ್ ಬಿ)ಯ ವ್ಯಾಪ್ತಿಯಲ್ಲಿಯೇ ಇದೆ. ನಮ್ಮ ಸಾಲ ಒಟ್ಟು ಸಾಲ ಒಂದು ಲಕ್ಷ ಕೋಟಿಯನ್ನು ಮೀರಿದ್ದರೂ ಅದು ನಮ್ಮ ಜಿಎಸ್‌ಡಿಪಿಯ ಶೇಕಡ 25ರ ಮಿತಿಯೊಳಗೆಯೇ ಇದೆ. ನಮ್ಮ ಹಣಕಾಸು ಕೊರತೆ ಕೂಡಾ ಜಿಎಸ್‌ಡಿಪಿಯ ಶೇಕಡಾ ಮೂರನ್ನು ಮೀರಿಲ್ಲ. ಕೇಂದ್ರದ ಬಿಜೆಪಿ ಆಡಳಿತದಲ್ಲಿ ಸರ್ಕಾರದ ಸಾಲ ಮಾತ್ರ ಹೆಚ್ಚಾಗುತ್ತಿಲ್ಲ, ಅವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ವೈಯಕ್ತಿಕ ಸಾಲ ಕೂಡಾ ಹೆಚ್ಚಾಗುತ್ತಿದ್ದರೆ, ನಿರುದ್ಯೋಗದಿಂದಾಗಿ ಕುಟುಂಬದ ಆದಾಯ ಕುಸಿಯತ್ತಿದೆ. ಹಾಗಿದ್ದರೆ ನರೇಂದ್ರ ಮೋದಿ ಸರ್ಕಾರದ ಸಾಲದ ಹಣ ಎಲ್ಲಿ ಸೋರಿಹೋಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಬೆಲೆ ಏರಿಕೆ, ನಿರುದ್ಯೋಗಗಳಿಂದಾಗಿ ತತ್ತರಿಸಿ ಹೋಗಿರುವ ರಾಜ್ಯದ ಜನತೆ ನಮ್ಮ ಗ್ಯಾರಂಟಿ ಮತ್ತು ಇತರ ಜನ ಕಲ್ಯಾಣ ಯೋಜನೆಗಳಿಂದಾಗಿ ಉಸಿರಾಡುವಂತಾಗಿದೆ. ಗ್ಯಾರಂಟಿ ಯೋಜನಗೆಳು ರಾಜ್ಯದ ಒಂದೂವರೆ ಕೋಟಿ ಕುಟುಂಬಗಳನ್ನು ನೇರವಾಗಿ ತಲುಪಿದೆ. 1.22 ಕೋಟಿ ಮಹಿಳೆಯರು ನಮ್ಮ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ನಮ್ಮ ಗ್ಯಾರಂಟಿ ಮತ್ತಿತರ ಕಲ್ಯಾಣ ಯೋಜನೆಗಳಿಂದಾಗಿ ಪ್ರತಿ ಕುಟುಂಬದ ಮಾಸಿಕ ಆದಾಯ ಏಳರಿಂದ ಹತ್ತು ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
"ಮಾನ್ಯ ಅಶೋಕ್ ಅವರೇ, ಬೆಂಗಳೂರು ನಗರದಲ್ಲಿ ಕೂತು ಆಧಾರವಿಲ್ಲದ ರಾಜಕೀಯ ಹೇಳಿಕೆಗಳನ್ನು ನೀಡುತ್ತಾ ಕಾಲ ಹರಣ ಮಾಡಬೇಡಿ. ಹಳ್ಳಿಗಳಿಗೆ ಹೋಗಿ ನಿಮ್ಮ ಪಕ್ಷದ ಬೆಂಬಲಿಗರ ಜೊತೆಯಲ್ಲಿಯೇ ಮಾತನಾಡಿ. ನಮ್ಮ ಸರ್ಕಾರದ ಯೋಜನೆಗಳಿಂದ ಅವರು ಏನನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೆ ಕೇಳಿ ನೋಡಿ. ಇಡೀ ಕರ್ನಾಟಕ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಮಾತನಾಡುತ್ತಿದೆ." ಎಂದು ಸಿದ್ದರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸನ್ಮಾನ್ಯ @RAshokaBJP ಅವರೇ, ಯಾಕೆ ನಮ್ಮ ಕೈಯಲ್ಲಿ ಬಡಿಗೆ ಕೊಟ್ಟು ಬಡಿಸಿಕೊಳ್ಳುತ್ತೀರಿ? ರಾಜ್ಯ ಸರ್ಕಾರದ ಸಾಲದ ಲೆಕ್ಕ ಹೇಳಿದ್ದೀರಿ, ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ನಿಮ್ಮದೇ ಪಕ್ಷದ ಸರ್ಕಾರದ ಸಾಲದ ಕತೆಯನ್ನು ಸ್ವಲ್ಪ ಹೇಳಿ ಬಿಡಿ. ನೀವು ಮರೆತಿದ್ದರೆ ನಾನು ಹೇಳುತ್ತೇನೆ ಕೇಳಿ.
— Siddaramaiah (@siddaramaiah) April 4, 2024
2014ರಲ್ಲಿ ಕೇವಲ ರೂ.55 ಲಕ್ಷ ಕೋಟಿಯಷ್ಟು…
Mr. @RAshokaBJP,
— Siddaramaiah (@siddaramaiah) April 4, 2024
Your concern regarding the state's debt is noted. However, it is essential to highlight that our administration has diligently ensured our debt levels remain compliant with the FRBM Act. Despite projections suggesting a potential increase in debt to over 1 lakh… https://t.co/DgpzUTeXw7
ಕೇಂದ್ರ ಸರ್ಕಾರ ಮಾಡಿರುವ ಸಾಲಕ್ಕೂ, ಸಿದ್ದರಾಮಯ್ಯ ಮಾಡಿರುವ ಸಾಲಕ್ಕೂ ವ್ಯತ್ಯಾಸ ಇದೆ: ಆರ್ ಆಶೋಕ್
"ಮಾನ್ಯ ಸಿಎಂ ಸಿದ್ದರಾಮಯ್ಯ ನವರೇ, ನಾನು ತಮ್ಮಂತೆ ಸ್ವಯಂ ಘೋಷಿತ ಆರ್ಥಿಕ ತಜ್ಞನಲ್ಲ. ಆದರೆ ತಮ್ಮಂತೆ ನನಗೊಬ್ಬನಿಗೇ ಎಲ್ಲವೂ ಗೊತ್ತು ಎಂಬ ಅಹಂಕಾರವೂ ಇಲ್ಲ" ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಆರ್ ಆಶೋಕ್ ಅವರು, "ಮಾನ್ಯ ಸಿಎಂ ಸಿದ್ದರಾಮಯ್ಯ ನವರೇ, ನಾನು ತಮ್ಮಂತೆ ಸ್ವಯಂ ಘೋಷಿತ ಆರ್ಥಿಕ ತಜ್ಞನಲ್ಲ. ಆದರೆ ತಮ್ಮಂತೆ ನನಗೊಬ್ಬನಿಗೇ ಎಲ್ಲವೂ ಗೊತ್ತು ಎಂಬ ಅಹಂಕಾರವೂ ಇಲ್ಲ. ಕೇಂದ್ರ ಸರ್ಕಾರ ಮಾಡಿರುವ ಸಾಲಕ್ಕೂ, ತಾವು ಮಾಡಿರುವ ಸಾಲಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ನಿಮಗೆ ಅರ್ಥವಾಗುವುದಿದ್ದರೆ ಓದಿಕೊಳ್ಳಿ. ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು, 2024ರ ಮಧ್ಯಂತರ ಬಜೆಟ್ನಲ್ಲಿ ಬಂಡವಾಳ ವೆಚ್ಚವನ್ನು ಸತತ ನಾಲ್ಕನೇ ವರ್ಷವೂ ಶೇ.11.1ರಷ್ಟು ಹೆಚ್ಚಿಸಿದೆ. ಇದರಿಂದ ಬಂಡವಾಳ ವೆಚ್ಚ 11.11 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ. ಇದು ದೇಶದ ಜಿಡಿಪಿಯ ಶೇ. 3.4ರಷ್ಟು ಆಗಿದೆ. ಅದೇ ನಿಮ್ಮ ಕಾರ್ಯವೈಖರಿ ನೋಡಿ. 2023-24 ರಲ್ಲಿ ತಾವು ಮಂಡಿಸಿದ ಬಜೆಟ್ ಗಾತ್ರ 3.27 ಲಕ್ಷ ಕೋಟಿ. ಅದರಲ್ಲಿ ಬಂಡವಾಳ ವೆಚ್ಚಕ್ಕೆ ತಾವು ಮೀಸಲಿಟ್ಟಿದ್ದು 54,000 ಕೋಟಿ. ಅದೇ 2024-2025ರ ಆರ್ಥಿಕ ಸಾಲಿಗೆ ತಾವು ಮಂಡಿಸಿರುವ ಕರ್ನಾಟಕದ ಬಜೆಟ್ ಗಾತ್ರ 3,71,383 ಕೋಟಿ. ಅಂದರೆ 2023-24 ರಲ್ಲಿ ತಾವು ಮಂಡಿಸಿದ 3.27 ಲಕ್ಷ ಕೋಟಿಗಿಂತ ದೊಡ್ಡದು. ಜೊತೆಗೆ ಕಳೆದ ವರ್ಷಕ್ಕಿಂತ ಸುಮಾರು 25 ಸಾವಿರ ಕೋಟಿ ರೂ. ಹೆಚ್ಚಿನ ಸಾಲ ಕೂಡ ಮಾಡಿದ್ದೀರಿ. ಆದರೆ ಬಂಡವಾಳ ವೆಚ್ಚಕ್ಕೆ ತಾವು ಮೀಸಲಿಟ್ಟಿದ್ದು ಕೇವಲ 55,000 ಕೋಟಿ, ಅಂದರೆ ಕಳೆದ ವರ್ಷಕ್ಕಿಂತ ಹೆಚ್ಚಾದ ಮೊತ್ತ ಎಷ್ಟು? ಕೇವಲ 1,000 ಕೋಟಿ. ಅಂದರೆ ಬಂಡವಾಳ ವೆಚ್ಚ ಹೆಚ್ಚಳವಾಗಿದ್ದು ಕೇವಲ 1.85% ಎಂದು ಎಂದು ತಿರುಗೇಟು ನೀಡಿದ್ದಾರೆ.
ಬಜೆಟ್ ಗಾತ್ರ ಹೆಚ್ಚಾದರೂ, ಸಾಲ ಹೆಚ್ಚಾದರೂ, ಬಂಡವಾಳ ವೆಚ್ಚ ಮಾತ್ರ ಯಾಕೆ ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ ಸಿಎಂ ಸಿದ್ದರಾಮಯ್ಯನವರೇ? ಸಾಲದ ದುಡ್ಡೆಲ್ಲಾ ಎಲ್ಲಿ ಹೋಗುತ್ತಿದೆ? ಹೆಚ್ಚಾದ ಬಜೆಟ್ ಗಾತ್ರವೆಲ್ಲಾ ಎಲ್ಲಿ ಹೋಯ್ತು? ನಿಮ್ಮ ಬಳಿ ಇದಕ್ಕೆಲ್ಲಾ ಉತ್ತರ ಇದೆಯೇ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಮಾನ್ಯ ಸಿಎಂ @siddaramaiah ನವರೇ, ನಾನು ತಮ್ಮಂತೆ ಸ್ವಯಂ ಘೋಷಿತ ಆರ್ಥಿಕ ತಜ್ಞನಲ್ಲ. ಆದರೆ ತಮ್ಮಂತೆ ನನಗೊಬ್ಬನಿಗೇ ಎಲ್ಲವೂ ಗೊತ್ತು ಎಂಬ ಅಹಂಕಾರವೂ ಇಲ್ಲ.
— R. Ashoka (ಮೋದಿ ಅವರ ಕುಟುಂಬ) (@RAshokaBJP) April 4, 2024
ಕೇಂದ್ರ ಸರ್ಕಾರ ಮಾಡಿರುವ ಸಾಲಕ್ಕೂ, ತಾವು ಮಾಡಿರುವ ಸಾಲಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ನಿಮಗೆ ಅರ್ಥವಾಗುವುದಿದ್ದರೆ ಓದಿಕೊಳ್ಳಿ.
ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ… https://t.co/KP47xCLdEN