ಚಲಿಸುತ್ತಿದ್ದ ʻನಮ್ಮ ಮೆಟ್ರೋʻ ರೈಲಿನಲ್ಲಿ ಹುಚ್ಚಾಟ; ನಾಲ್ವರು ವಿದ್ಯಾರ್ಥಿಗಳಿಗೆ ದಂಡ
ಬೆಂಗಳೂರು, ಅ.18: ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ರೋಲಿಂಗ್ ವ್ಯಾಯಾಮ ಮಾಡಿ ಹುಚ್ಚಾಟ ಮೆರೆದ ನಾಲ್ವರು ವಿದ್ಯಾರ್ಥಿಗಳಿಗೆ ಬಿಎಂಆರ್‍ಸಿಎಲ್ 500 ರೂ. ದಂಡ ವಿಧಿಸಿದೆ.
ಹಸಿರು ಲೈನ್ ಮೆಟ್ರೋದಲ್ಲಿ ಅ.17ರ ರಾತ್ರಿ ಯಲಚೇನಹಳ್ಳಿಗೆ ಹೋಗುತ್ತಿದ್ದಾಗ ಮೀತ್ ಪಟೇಲ್ ಹಾಗೂ ಇತರ ಮೂವರು ವಿದ್ಯಾರ್ಥಿಗಳು ಮೆಟ್ರೋದಲ್ಲಿ ಪ್ರಯಾಣಿಸು ವೇಳೆ ನಿಲ್ಲುವಾಗ ಹಿಡಿಯುವ ಹ್ಯಾಂಡಲ್‍ಗಳನ್ನು ಬಳಸಿ ಅದರಲ್ಲಿ ರೋಲಿಂಗ್ ವ್ಯಾಯಾಮ ಮಾಡಿ ಹುಚ್ಚಾಟ ಮೆರೆದಿದ್ದರು. ವಿದ್ಯಾರ್ಥಿಗಳ ವರ್ತನೆಗೆ ಸಹಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದರೂ, ವಿದ್ಯಾರ್ಥಿಗಳು ಅದಕ್ಕೆ ಕಿವಿ ಕೊಡದೆ ಉದ್ಧಟತನ ಮುಂದುವರಿಸಿದ್ದರು.
ಈ ನಡುವೆ, ಪ್ರಯಾಣಿಕರು ವಿದ್ಯಾರ್ಥಿಗಳ ವರ್ತನೆಯ ವಿಡಿಯೊ ಮಾಡಿ ಯಲಚೇನಹಳ್ಳಿಯ ಮೆಟ್ರೋ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿಗೆ ನೀಡಿದ್ದರು. ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿಯೇ ಭದ್ರತಾ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ಆ ವಿದ್ಯಾರ್ಥಿಗಳಿಗೆ 500 ರೂ. ದಂಡ ವಿಧಿಸಿ, ಮತ್ತೊಮ್ಮೆ ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ನೀಡಲಾಯಿತು ಎಂದು ಬಿಎಂಆರ್‍ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.