ಕಾವೇರಿ ವನ್ಯಧಾಮದಲ್ಲಿ ಬಿಳಿ ಕಡವೆ ಪತ್ತೆ

ಕಡವೆಯ ಚಿತ್ರ
ಚಾಮರಾಜನಗರ, ಸೆ.7: ಚಿರತೆಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ತಂಡವೊಂದು ಅಳವಡಿಸಿದ್ದ ಕ್ಯಾಮರಾದಲ್ಲಿ ಅಪರೂಪದ ಬಿಳಿ ಬಣ್ಣದ ಹೆಣ್ಣು ಕಡವೆಯ ಚಿತ್ರ ಸೆರೆಯಾಗಿದೆ. ಅದು ಇನ್ನೊಂದು ಹೆಣ್ಣು ಕಡವೆಯೊಂದಿಗೆ ಇರುವುದು ಕ್ಯಾಮರಾದಲ್ಲಿ ಕಂಡು ಬಂದಿದೆ.
ಚಿರತೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮತ್ತು ತಂಡ ನಗರದ ಕಾವೇರಿ ವನ್ಯಧಾಮದಲ್ಲಿ ಚಿರತೆಯ ಕುರಿತ ಅಧ್ಯಯನಕ್ಕೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಕಡವೆಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಇಂತಹ ವಿಶೇಷ ಲಕ್ಷಣಗಳು ಕಂಡು ಬಂದಾಗ ಹೆಚ್ಚಿನ ಅಧ್ಯಯನ ಮಾಡುವುದು ಅವಶ್ಯಕತೆ ಇದೆ ಎಂದು ಸಂಜಯ್ ಗುಬ್ಬಿ ಮತ್ತು ತಂಡ ಪ್ರತಿಪಾದಿಸಿದೆ. ವಿಶೇಷವೆಂದರೆ, ಇದೇ ಪ್ರದೇಶದಲ್ಲಿ ಈ ಹಿಂದೆ ಬಿಳಿ ಬಣ್ಣದ ಕೆನ್ನಾಯಿ ಕಂಡು ಬಂದಿತ್ತು.
ಇದು ಲ್ಯೂಸಿಸ್ಟಿಕ್ ಸ್ಥಿತಿ
'ಈ ಸ್ಥಿತಿಯನ್ನು ಲ್ಯೂಸಿಸ್ಟಿಕ್ ಎಂದು ಗುರುತಿಸಲಾಗಿದೆ. ಪ್ರಾಣಿಗಳ ಚರ್ಮದಲ್ಲಿ ವರ್ಣದ್ರವ್ಯದ ಕೊರತೆ ಉಂಟಾಗಿ, ಚರ್ಮ ಬಿಳಿ ಅಥವಾ ಮಂದ ಬಣ್ಣಕ್ಕೆ ಬದಲಾಗುವ ವಿರಳ ಪ್ರಕ್ರಿಯೆಯನ್ನು ಲ್ಯೂಸಿಸಮ್ ಎಂದು ಕರೆಯಲಾಗುತ್ತದೆ. ಇದು, ಪ್ರಾಣಿಗಳ ಚರ್ಮದಲ್ಲಿ ಮೆಲನಿನ್ ಕೊರತೆಯಿಂದಾಗಿ ಉಂಟಾಗುವ ಅಲ್ಪಿನಿಸಂ ಸ್ಥಿತಿಗಿಂತ ಭಿನ್ನ. ಅಲ್ಟಿನಿಸಂ ಸ್ಥಿತಿಯಲ್ಲಿ ಪ್ರಾಣಿಗಳ ಕಣ್ಣು ಗುಲಾಬಿ ಅಥವಾ ಕೆಂಪು ಬಣ್ಣದಿಂದ ಕೂಡಿರುತ್ತದೆ ಆದರೆ ಲ್ಯೂಸಿಸಂನಲ್ಲಿ ಪ್ರಾಣಿಗಳ ಕಣ್ಣುಗಳು ಸಹಜ ಬಣ್ಣ ಹೊಂದಿರುತ್ತವೆ' ಎಂದು ತಂಡ ವಿವರಿಸಿದೆ.
ʼಕಾವೇರಿ ವನ್ಯಜೀವಿಧಾಮ ಒಂದು ಬಚ್ಚಿಟ್ಟ ಮುಕುಟವಾಗಿತ್ತು. ಇದೊಂದೇ ವನ್ಯಜೀವಿಧಾಮದಲ್ಲಿ ಹಲವು ವಿಶೇಷತೆಗಳು ಹೊಸದಾಗಿ ಕಂಡುಬಂದಿವೆ. ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜೇನ್ ಹೀರ್ಕ ಅಥವಾ ತರಕರಡಿ ಕಂಡುಬಂದದ್ದು ಇಲ್ಲಿಯೇ. ಕಳೆದ ವರ್ಷ ಇಲ್ಲಿ ಬಿಳಿ ಬಣ್ಣದ ಕೆನ್ನಾಯಿ ಕಂಡು ಬಂದಿದೆ. ಈಗ ಬಿಳಿ ಕಡವೆ ಕಾಣಸಿಕ್ಕಿದೆ. ಇತ್ತೀಚಿಗೆ ಅರಣ್ಯ ಇಲಾಖಾ ಸಿಬ್ಬಂದಿ ಇಲ್ಲಿ ಬಿಳಿ ನವಿಲನ್ನೂ ನೋಡಿದ್ದಾರೆ. ಇಷ್ಟೆಲ್ಲ ವಿಶೇಷತೆ ಇರುವ ಕಾಡನ್ನು ಸಂರಕ್ಷಿಸಬೇಕಿದೆʼ
- ಸಂಜಯ್ ಗುಬ್ಬಿ, ವನ್ಯಜೀವಿ ತಜ್ಞ