ನನ್ನನ್ನು ಬಿಜೆಪಿ ಬಿಟ್ಟು ಹೋಗಲಿ ಅಂತ ಹೇಳಲು ಈಶ್ವರಪ್ಪ ಯಾರು?: ಎಸ್.ಟಿ. ಸೋಮಶೇಖರ್ ಕಿಡಿ
''ಈಶ್ವರಪ್ಪನನ್ನು ನಂಬಿ ನಾನು ಪಕ್ಷಕ್ಕೆ ಬರಲಿಲ್ಲ''
ಬೆಂಗಳೂರು: ''ನನ್ನನ್ನು ಪಕ್ಷದಿಂದ ಬಿಟ್ಟು ಹೋಗಲಿ ಅಂತ ಹೇಳಲು ಈಶ್ವರಪ್ಪ ಯಾರು?'' ಎಂದು ಮಾಜಿ ಸಚಿವ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಯಾವುದೇ ಬೆಲೆ ಇಲ್ಲ. ಬೆಲೆ ಇಲ್ಲದವರ ಹೇಳಿಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ'' ಎಂದರು.
''ಈಶ್ವರಪ್ಪ ಏನು ರಾಜ್ಯಾಧ್ಯಕ್ಷನಾ? ಈಶ್ವರಪ್ಪನನ್ನು ನಂಬಿ ನಾನು ಪಕ್ಷಕ್ಕೆ ಬರಲಿಲ್ಲ. ನಾನು ಯಡಿಯೂರಪ್ಪರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ಇಷ್ಟೆಲ್ಲಾ ಬೆಳವಣಿಗೆಗಳಾದ ಮೇಲೆ ನಾನು ಯಡಿಯೂರಪ್ಪನವರ ಜೊತೆ ಮಾತನಾಡಿದ್ದೇನೆ. ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡ ಎಂದು ಹೇಳಿದ್ದಾರೆ'' ಎಂದು ತಿಳಿಸಿದರು.
ಸೋಮಶೇಖರ್ ಬೇಡವಾದರೆ ಹೋಗಲಿ ಎಂದು ಹೇಳಿದ್ದ ಕೆ.ಎಸ್ ಈಶ್ವರಪ್ಪ
ಶಿವಮೊಗ್ಗದಲ್ಲಿ ಮಾತನಾಡಿದ್ದ ಕೆ.ಎಸ್ ಈಶ್ವರಪ್ಪ, ''ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರದಲ್ಲಿ ಕೇಂದ್ರ ತೆಗೆದುಕೊಂಡ ತೀರ್ಮಾನವನ್ನು ಪ್ರಶ್ನಿಸುವ ಅಧಿಕಾರ ನಮಗೆ ಇಲ್ಲ. ಈ ನಿಟ್ಟಿನಲ್ಲಿ ಎಸ್‌ಟಿ ಸೋಮಶೇಖರ್ ಅವರಿಗೂ ವಿನಾಯಿತಿ ಇಲ್ಲ. ಕೇಂದ್ರದ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ಎಸ್‌ಟಿ ಸೋಮಶೇಖರ್ ಬೆಕಾದರೆ ನಮ್ಮ ಜೊತೆಗೆ ಇರಲಿ, ಬೇಡವಾದರೆ ಹೋಗಲಿ'' ಎಂದು ಹೇಳಿಕೆ ನೀಡಿದ್ದರು.