ರಾಜಕಾರಣದಿಂದ ಯಾರು ನಿವೃತ್ತಿಯಾಗಲಿದ್ದಾರೆಂಬುದು ಕೆಲ ದಿನಗಳಲ್ಲಿ ಗೊತ್ತಾಗಲಿದೆ: ಸಿದ್ದರಾಮಯ್ಯರಿಗೆ ಬಿಎಸ್ ವೈ ತಿರುಗೇಟು
ಮೈಸೂರು: ಮನೆಗೆ ಹೋಗುವ ಕಾಲ ಹತ್ತಿರ ಬಂದಾಗ ಇನ್ನೊಬ್ಬರ ಬಗ್ಗೆ ಹೇಳುವುದು ಸ್ವಾಭಾವಿಕ. ರಾಜಕಾರಣದಿಂದ ಯಾರು ನಿವೃತ್ತಿಯಾಗಲಿದ್ದಾರೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತಿನ ತಿರುಗೇಟು ನೀಡಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಶುಕ್ರವಾರ ಆಗಮಿಸಿ ದೇವರ ದರ್ಶನ ಪಡೆದ ಯಡಿಯೂರಪ್ಪ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಯಡಿಯೂರಪ್ಪ ನಿವೃತ್ತಿ ಘೋಷಣೆ ಮಾಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಮನೆಗೆ ಹೋಗುವ ಕಾಲ ಹತ್ತಿರವಾಗಿದೆ. ಮನೆಗೆ ಹೋಗುವ ಕಾಲ ಹತ್ತಿರ ಬಂದಾಗ ಅವರು ಇನ್ನೊಬ್ಬರ ಬಗ್ಗೆ ಹೇಳುವುದು ಸ್ವಾಭಾವಿಕ. ಮುಂದೆ ಯಾರು ನಿವೃತ್ತರಾಗುತ್ತಾರೆ, ನ್ಯಾಯಾಲಯಗಳಲ್ಲಿ ಏನೆಲ್ಲ ಆಗುತ್ತದೆ ಎಂಬುದು ಗೊತ್ತಾಗಲಿದೆ. ಆಗ ಯಾರು ನಿವೃತ್ತಿ ಆಗಬೇಕು ಎಂಬುದನ್ನು ತೀರ್ಮಾನ ಮಾಡೋಣ ಎಂದರು.
ಈ ದೇಶದ ಇತಿಹಾಸದಲ್ಲಿ ಒಬ್ಬ ಮುಖ್ಯಮಂತ್ರಿ ತಮ್ಮ ಮನೆಯವರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ಬಾಳುವ ನಿವೇಶನ ಕೊಟ್ಟ ಉದಾಹರಣೆ ಇದೆಯೇ? ಸ್ವಂತ ಹೆಂಡತಿಗೆ ಸೈಟು ಕೊಟ್ಟಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.
ನನ್ನ ವಿರುದ್ಧದ ಪೊಕ್ಸೊ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ತೀರ್ಮಾನ ಆದ ಬಳಿಕ ಸತ್ಯ ಸಂಗತಿ ಬಹಿರಂಗ ಆಗುತ್ತದೆ. ಅಲ್ಲಿಯವರೆಗೂ ನಾನು ಏನನ್ನೂ ಮಾತನಾಡುವುದಿಲ್ಲ. ಅಲ್ಲಿಯೇ ಸಿದ್ದರಾಮಯ್ಯ ಅವರಿಗೆ ತಕ್ಕ ಉತ್ತರ ಸಿಗಲಿದೆ ಎಂದು ಹೇಳಿದರು.
ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಯು ಇತಿಹಾಸದಲ್ಲೇ ಐತಿಹಾಸಿಕ ಪಾದಯಾತ್ರೆ. ಭ್ರಷ್ಟ ಸರ್ಕಾರ ಕಿತ್ತೊಗೆಯಲು ವಿಜಯೇಂದ್ರ ನೇತೃತ್ವದಲ್ಲಿ ಈ ಪಾದಯಾತ್ರೆ ನಡೆಯುತ್ತಿದೆ. ಜನರಿಂದ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.