ಕೇವಲ ಮಾಜಿ ಸಿಎಂ ಮಕ್ಕಳಿಗೆ ಅಧಿಕಾರ ಕೊಟ್ಟರೆ ನಾವೇನು ಮಾಡಬೇಕು?: ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ
ʼʼನಾನು ಮೂರು ಸಲ ಶಾಸಕನಾಗಿದ್ದೇನೆ...ʼʼ
ಶಿವಮೊಗ್ಗ, ಅ.30: ಕೇವಲ ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ ಅಧಿಕಾರ ಕೊಟ್ಟರೆ ನಾವು ಏನು ಮಾಡಬೇಕು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಮಾಜಿ ಮುಖ್ಯಮಂತ್ರಿ ಮಕ್ಕಳಿಗೆ, ಮಂತ್ರಿ ಮಕ್ಕಳಿಗೆ ಯಾಕೆ ಅಧಿಕಾರ ಕೊಡಬೇಕು ಎಂದು ಪ್ರಶ್ನಿಸಿದ ಅವರು, ನಮ್ಮಂತಹ ಸಾಮಾನ್ಯರಿಗೂ ಅಧಿಕಾರ ಕೊಡಿ ಎಂದು ಆಗ್ರಹಿಸಿದರು.
ʼನಾನು ಮೂರು ಸಲ ಶಾಸಕನಾಗಿದ್ದೇನೆ.ಕೇವಲ ಮುಖ್ಯಮಂತ್ರಿಗಳ ಮಕ್ಕಳಿಗೆ ಯಾಕೆ ಅಧಿಕಾರ ಕೊಡಬೇಕುʼ ಎಂದು ಪ್ರಶ್ನಿಸಿದರು.
ಮಧು ಬಂಗಾರಪ್ಪ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೋ ಇಲ್ವೋ ನನಗೆ ಗೊತ್ತಿಲ್ಲ. ನನಗೆ ಜಿಲ್ಲಾ ಉಸ್ತುವಾರಿಗಳು ಎಲ್ಲೂ ಕರೆಯುತ್ತಿಲ್ಲ. ನಾನು ಎಲ್ಲಿಗೂ ಹೋಗಲ್ಲ. ಅವರು ನನ್ನನ್ನು ಕೇವಲ ತಾಲೂಕಿಗೆ ಸೀಮಿತ ಮಾಡಿದ್ದಾರೆ ಅನಿಸುತ್ತೆ. ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೋ ಇಲ್ವೋ ಗೊತ್ತಿಲ್ಲ. ಅವರು ಬಂದ್ರೆ ಭೀಮಣ್ಣ ನಾಯ್ಕರನ್ನ ಕರ್ಕೊಂಡು ಬರ್ತಾರೆ. ಅವರು ನಮಗೆ ಕರೆಯಲ್ಲ. ನಾವು ಹೋಗಲ್ಲ. ನಾನು ಸಾಮಾನ್ಯ ವ್ಯಕ್ತಿ. ನನ್ನ ಸಾಮರ್ಥ್ಯ ಕಸಿದುಕೊಳ್ಳಲು ಯಾರಿಂದಲೂ ಸಾಧ್ಯ ಇಲ್ಲ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಜತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇದ್ದಾರೆ. ನಾನು ಕೇವಲ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ನಾನು ಕೂಡ ನಾಯಕ. ನನಗೆ ಸರಕಾರ ಮತ್ತು ಯಾವುದೇ ಮಂತ್ರಿಗಳ ಮೇಲೆ ಅಸಮಾಧಾನ ಇಲ್ಲ ಎಂದು ಹೇಳಿದರು.
ನನಗೆ ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಬೇಕು. ನಾನು ಸಂಸತ್ ಚುನಾವಣೆಗೆ ಆಕಾಂಕ್ಷಿಯಾಗಿದ್ದೇನೆ. ನಾನ್ಯಾಕೆ ಎಂಪಿ ಆಗಬಾರದು. ಯಡಿಯೂರಪ್ಪರ ಮಗ ರಾಘವೇಂದ್ರ ಅವರನ್ನು ಎದುರಿಸುವ ಶಕ್ತಿ ನನಗೆ ಇದೆ ಎಂದರು.
ಈಗಾಗಲೇ ಗೀತಾ ಶಿವರಾಜ್ ಕುಮಾರ್ ಸಂಸತ್ ಚುನಾವಣೆಗೆ ಆಸಕ್ತಿ ತೋರಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ನನಗೆ ಗೊತ್ತಿಲ್ಲ. ಅವರೇನು ನನಗೆ ಬಂದು ಹೇಳಿಲ್ಲ. ಅವರು ಜಿಲ್ಲೆಯಲ್ಲಿ ಬಂದು ಎಲ್ಲೂ ಓಡಾಡಿದ್ದು ಕಂಡಿಲ್ಲ ಎಂದರು.
ಕಾಂಗ್ರೆಸ್ ವಿರುದ್ದ ಒಂದು ಸಣ್ಣ ಷಡ್ಯಂತ್ರ ನಡೆಯುತ್ತಿದೆ. ಬಿಜೆಪಿಗರು ಕೆಲವು ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ನಮ್ಮ ಶಾಸಕರು ಯಾರೂ ಪಕ್ಷ ತೊರೆಯಲ್ಲ. ಈಗಾಗಲೇ ೧೭ ಜನ ಪಕ್ಷ ಬಿಟ್ಟು ಬಿಜೆಪಿಗೆ ಹೋದವರು ಅನುಭವಿಸಿದ್ದಾರೆ ಎಂದು ಅವರು ಹೇಳಿದರು.