ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ, ರೈತರ ಹಿತ ಕಾಯುವುದು ಶತಸಿದ್ಧ: ಸಿದ್ದರಾಮಯ್ಯ ಭರವಸೆ
ಧರಣಿ ಸ್ಥಳಕ್ಕೆ ಭೇಟಿ ಮಾಡಿ ರೈತರ ಮನವಿ ಸ್ವೀಕರಿಸಿದ ಸಿಎಂ
ಮಂಡ್ಯ, ಅ 31: ನಾವು ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಕಾಪಾಡುವುದು ನಮಗೆ ಮುಖ್ಯ. ಎನೇ ಪರಿಸ್ಥಿತಿ ಬಂದರೂ ರೈತರ ಹಿತ ಕಾಯುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ತಮಿಳುನಾಡಿಗೆ ನೀರು ಬಿಡುಗಡೆ ವಿರುದ್ಧ 56 ದಿನದಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಮಂಗಳವಾರ ಭೇಟಿ ಮಾಡಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಜಲಾಶಯಗಳು ತುಂಬಲಿಲ್ಲ. ಭೀಕರ ಬರಗಾಲ ಎದುರಿಸುತ್ತಿದ್ದೇವೆ. ಈ ನಡುವೆ ನ್ಯಾಯಾಲಯದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಬೇಕಾಗಿದೆ. ಆದರೂ, ಮುಂಗಾರು ಬೆಳೆ ರಕ್ಷಣೆ ಮಾಡುತ್ತೇವೆ ಎಂದು ಅವರು ಅಭಯ ನೀಡಿದರು.
ನಾವು ತಮಿಳುನಾಡಿಗೆ 177.25 ಟಿಎಂಸಿ ನೀರು ಕೊಡಬೇಕು ಎನ್ನುವ ಆದೇಶ ಹೊರಬಿದ್ದಿದೆ. ನೀರು ಬಿಡಲು ಸಾಧ್ಯವಿಲ್ಲವೆಂದು ಕಾವೇರಿ ಜಲ ನಿರ್ವಹಣಾ ಸಮಿತಿ ಮತ್ತು ನಿಯಂತ್ರಣಾ ಪ್ರಾಧಿಕಾರದ ಎದುರು ಬಲವಾಗಿ ವಾದ ಮಂಡಿಸಿದ್ದೇವೆ. ಆದರೂ ಮೊದಲು 5,000 ಕ್ಯೂಸೆಕ್ ನೀರು ಬಿಡಲು ಹೇಳಿದರು. ಬಳಿಕ 3,000 ಕ್ಯೂಸೆಕ್ ನೀರು ಬಿಡಲು ಆದೇಶ ಬಂತು. ಈಗ ಮತ್ತೆ 2,600 ಕ್ಯೂಸೆಕ್ ನೀರು ಬಿಡಲು ಆದೇಶವಾಗಿದೆ ಎಂದು ಅವರು ವಿವರಿಸಿದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಪಿ.ರವಿಕುಮಾರ್, ರಮೇಶ್ ಬಾಬು ಬಂಡಿಸಿದ್ದೇಗೌಡ, ಗೂಳೀಗೌಡ, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಇತರ ಮುಖಂಡರು ಉಪಸ್ಥಿತರಿದ್ದರು.
“ಆದೇಶವನ್ನು ಪಾಲಿಸುವ ಜವಾಬ್ಧಾರಿಯೂ ಇದೆ. ಹಾಗಾಗಿ ಜಲಾಶಯಗಳಲ್ಲಿ ಲಭ್ಯವಿರುವ ನೀರಿನಲ್ಲಿ ಅಲ್ಪಪ್ರಮಾಣವನ್ನು ಬಿಡುಗಡೆ ಮಾಡುತ್ತಿದ್ದೇವೆ. ಆದರೆ, ನಾವು ಕುಡಿಯುವ ನೀರಿಗೆ ಮತ್ತು ಹಾಲಿ ಇರುವ ಮುಂಗಾರು ಬೆಳೆ ಉಳಿಸಿಕೊಳ್ಳಲು ಮೊದಲ ಆದ್ಯತೆ ನೀಡುತ್ತೇವೆ. ನಾನೂ ಕಾವೇರಿ ಭಾಗದ ರೈತ ಕುಟುಂಬದಿಂದ ಬಂದವನು. ರೈತರ ಸಂಕಷ್ಟ ಚೆನ್ನಾಗಿ ಗೊತ್ತಿದೆ. ಅಧಿಕಾರಕ್ಕಾಗಿ ರೈತರ ಬಲಿ ಕೊಡುವುದಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ನಿಮ್ಮ ಪರವಾಗಿ ಇರುತ್ತೇವೆ, ಅನುಮಾನವೇ ಬೇಡ.”
-ಸಿದ್ದರಾಮಯ್ಯ, ಮುಖ್ಯಮಂತ್ರಿ.
ರೈತ ಹಿತರಕ್ಷಣಾ ಸಮಿತಿಯಿಂದ ಸಿಎಂಗೆ ಮನವಿ
ಇದೇ ವೇಳೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮುಖಂಡರು, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು. ಕಾವೇರಿ ಜಲ ನಿರ್ವಹಣಾ ಸಮಿತಿ, ನಿಯಂತ್ರಣ ಪ್ರಾಧಿಕಾರ ಮತ್ತು ನ್ಯಾಯಾಲಯಕ್ಕೆ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿವರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಶಾಶ್ವತ ಪರಿಹಾರ ರೂಪಿಸಬೇಕು. ಸಮರ್ಥವಾಗಿ ಕಾನೂನು ಹೋರಾಟ ಮಾಡಬೇಕು. ಸಮಿತಿ, ಪ್ರಾಧಿಕಾರಕ್ಕೆ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು. ತಮಿಳುನಾಡಿನಂತೆ ರಾಜ್ಯದಲ್ಲೂ ಕಾವೇರಿ ನೀರಾವರಿ ಪ್ರದೇಶ ವಿಸ್ತರಿಸಬೇಕು. ಮೇಕೆದಾಟು ಸೇರಿದಂತೆ ಸಣ್ಣಪುಟ್ಟ ನೀರಾವರಿ ಯೋಜನೆಗಳನ್ನು ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ನೀರಾವರಿ ಸೌಲಭ್ಯದ ಅಭಿವೃದ್ಧಿ, ಅಂತರ್ಜಲ ಅಭಿವೃದ್ಧಿ, ವಿದ್ಯುತ್ ಸೌಲಭ್ಯಕ್ಕೆ ರಾಜ್ಯ ಸರಕಾರ ಸಂಕಲ್ಪ ಮಾಡಿ, ಬದ್ಧತೆಯಿಂದ, ಇಚ್ಛಾಶಕ್ತಿಯಿಂದ ಹೆಜ್ಜೆ ಇಡಬೇಕು. ಬೆಳೆ ಕಳೆದುಕೊಂಡಿರುವುದರಿಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಕೃಷಿ ಪಂಪ್‍ಸೆಟ್‍ಗಳಿಗೆ ನಿತ್ಯ ಹಗಲು ವೇಳೆ 10 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು ಎಂದೂ ಅವರು ತಾಕೀತು ಮಾಡಿದರು.